ಜೈಶ್-ಎ-ಮೊಹಮ್ಮದ್ ಸಂಘಟನೆಯ 8 ಆರೋಪಿಗಳನ್ನು ಬಂಧಿಸಿದ ಗುಜರಾತ್ ಎಟಿಎಸ್
ಅಹಮದಾಬಾದ್, 04 ಜುಲೈ (ಹಿ.ಸ.): ಆ್ಯಂಕರ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಹು ರಾಜ್ಯಗಳಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ಗೆ ಸಂಬಂಧವಿದೆ ಎಂದು ಶಂಕಿಸಲಾದ ಘಟಕವೊಂದನ್ನು ಭೇದಿಸಿದ್ದು, ಎಂಟು ಆರೋಪಿಗಳನ್ನು ಬಂಧಿಸಿದೆ. ಈ ಘಟಕವು ಗಡಿ ಆಚ
ಗುಜರಾತ್ ಎಟಿಎಸ್ ಬಂಧಿಸಿರುವ ಆರೋಪಿಗಳು


ಅಹಮದಾಬಾದ್, 04 ಜುಲೈ (ಹಿ.ಸ.):

ಆ್ಯಂಕರ್:

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಹು ರಾಜ್ಯಗಳಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ಗೆ ಸಂಬಂಧವಿದೆ ಎಂದು ಶಂಕಿಸಲಾದ ಘಟಕವೊಂದನ್ನು ಭೇದಿಸಿದ್ದು, ಎಂಟು ಆರೋಪಿಗಳನ್ನು ಬಂಧಿಸಿದೆ. ಈ ಘಟಕವು ಗಡಿ ಆಚೆ ಇರುವ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದು, ದೇಶವಿರೋಧಿ ಚಟುವಟಿಕೆಗಳಿಗಾಗಿ ಜಾಲವನ್ನು ನಿರ್ಮಿಸುತ್ತಿತ್ತು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.

ಎಟಿಎಸ್‌ನ ಐದು ವಿಶೇಷ ತಂಡಗಳು ಗುಜರಾತ್‌ನ ಬನಾಸ್‌ಕಾಂಠಾ, ನವಸಾರಿ ಮತ್ತು ಪಾಟಣ ಜಿಲ್ಲೆಗಳ ಪೊಲೀಸ್ ಇಲಾಖೆಗಳೊಂದಿಗೆ ಹಾಗೂ ಮಧ್ಯಪ್ರದೇಶದ ದೇವಾಸ್ ಪೊಲೀಸರ ಸಹಕಾರದಲ್ಲಿ ಈ ಕಾರ್ಯಾಚರಣೆ ನಡೆಸಿವೆ. ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಎಟಿಎಸ್ ಮುಖ್ಯ ಕಚೇರಿಗೆ ಕರೆತರಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಅವರ ವಿಚಾರಧಾರೆ ಮತ್ತು ಪ್ರಚಾರ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು ಎಂದು ತಿಳಿದುಬಂದಿದೆ. ಸಂಘಟನೆಗೆ ಸ್ಥಳೀಯ ಮಟ್ಟದಲ್ಲಿ ಲಾಜಿಸ್ಟಿಕ್ ಜಾಲ ನಿರ್ಮಿಸುವುದು, ಪ್ರಚಾರ ನಡೆಸುವುದು ಹಾಗೂ ಭವಿಷ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ನೆಲೆಯೊದಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದರು ಎಂದು ಎಟಿಎಸ್ ಆರೋಪಿಸಿದೆ.

ತನಿಖೆಯ ಪ್ರಕಾರ, ಈ ಘಟಕದ ಸದಸ್ಯರನ್ನು ವಿವಿಧ ನಗರಗಳಲ್ಲಿ ಹರಡಲಾಗಿತ್ತು. ಅಂತಿಮ ಸೂಚನೆ ಬರುವವರೆಗೆ ಸುಲಭವಾಗಿ ಸಂಚರಿಸಲು ನೋಂದಣಿ ಮಾಡಿಸದ ಆಸ್ತಿಗಳನ್ನು ಬಳಸಲಾಗುತ್ತಿತ್ತು. ಸ್ಥಳೀಯ ಜಾಲ ನಿರ್ಮಾಣಕ್ಕಾಗಿ ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳಿಂದ ಸುಮಾರು ಮೂರು ಲಕ್ಷ ರೂಪಾಯಿ ಹಣ ಬಂದಿದ್ದು, ಆ ಹಣದಿಂದ ಹಳೆಯ ಕಾರೊಂದನ್ನು ಖರೀದಿಸಿ, ಉದ್ದೇಶಪೂರ್ವಕವಾಗಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ. ಇದರಿಂದ ವಾಹನಗಳ ನೋಂದಣಿ ದಾಖಲೆಗಳಲ್ಲಿ ತಮ್ಮ ಗುರುತು ಪತ್ತೆಯಾಗದಂತೆ ನೋಡಿಕೊಳ್ಳಲಾಗಿತ್ತು ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ.

ಆರೋಪಿಗಳು ಸಂಸ್ಥೆಗಳ ವಸತಿ ಸೌಲಭ್ಯಗಳನ್ನು ಆಶ್ರಯವಾಗಿ ಬಳಸಿಕೊಂಡಿದ್ದರು ಎನ್ನಲಾಗಿದೆ. ಮೂವರು ಆರೋಪಿಗಳನ್ನು ಪಾಟಣದ ಖಾಡಿಯಾಸ್ನಾದ ಜಾಮಿಯಾ ಅಬುಲ್ ಹಸನ್ ಮದರಸಾದಲ್ಲಿ ಇರಿಸಲಾಗಿತ್ತು. ಮತ್ತೊಬ್ಬ ಆರೋಪಿಯನ್ನು ನವಸಾರಿಯ ಜಾಮಿಯಾ ರಹ್ಮಾನಿಯಾ ಮದರಸಾದಲ್ಲಿ ತಂಗಿಸಲಾಗಿತ್ತು. ಉಳಿದ ಆರೋಪಿಗಳು ಮೆಹಸಾಣಾ, ಬನಾಸ್‌ಕಾಂಠಾ ಹಾಗೂ ದೇವಾಸ್ ಪ್ರದೇಶಗಳಲ್ಲಿ ಜಾಲದ ವಿವಿಧ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು ಎಂದು ಎಟಿಎಸ್ ತಿಳಿಸಿದೆ.

ಶೋಧ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದಲ್ಲಿ ಮುದ್ರಿತವಾಗಿದ್ದ ಮಸೂದ್ ಅಜರ್ ಅವರ ಪುಸ್ತಕಗಳು ಹಾಗೂ ಸಂಘಟನೆಗೆ ಸೇರ್ಪಡೆಯಾಗಲು ಉರ್ದು ಭಾಷೆಯಲ್ಲಿ ಟೈಪ್ ಮಾಡಿ ಅವರಿಗೆ ಕಳುಹಿಸಲಾಗಿದ್ದ ಎಂಟು ಪತ್ರಗಳು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್ ಎಟಿಎಸ್‌ನ ಡಿಐಜಿ ಸುನೀಲ್ ಜೋಶಿ ನೀಡಿರುವ ಮಾಹಿತಿ ಪ್ರಕಾರ, ಈ ಘಟಕವು ಪಾಕಿಸ್ತಾನದಲ್ಲಿರುವ ಅಬ್ದುಲ್ಲಾ ಮತ್ತು ಮೊಹಮ್ಮದ್ ಉಮರ್ ಎಂಬ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಡಿಜಿಟಲ್ ಸಾಕ್ಷ್ಯಗಳು ಹಾಗೂ ವಿಚಾರಣೆ ಆಧರಿಸಿ ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ.

ಬಂಧಿತ ಎಲ್ಲ ಎಂಟು ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯ ವಿವಿಧ ಕಲಂಗಳು ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚಿನ ಸಾಕ್ಷ್ಯಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande