
ಬಾಗಲಕೋಟೆ, 04 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ
ಬೀಳಗಿ ತಾಲೂಕಿನ ರೈತರು ಹಲವು ದಶಕಗಳಿಂದ ಎದುರು ನೋಡುತ್ತಿದ್ದ ಮಹತ್ವಾಕಾಂಕ್ಷೆಯ ಬೀಳಗಿ ಏತ ನೀರಾವರಿ ಯೋಜನೆ ಇದೀಗ ಸಾಕಾರಗೊಳ್ಳುವ ಹಂತ ತಲುಪಿದೆ. ರಾಜ್ಯ ಸರ್ಕಾರ ಯೋಜನೆಗೆ ₹98.50 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಿರುವುದಾಗಿ ಬೀಳಗಿ ಶಾಸಕ ಜಿ.ಟಿ. ಪಾಟೀಲ ತಿಳಿಸಿದ್ದಾರೆ.
ಈ ನಿರ್ಧಾರದಿಂದ ಕೃಷ್ಣಾ ನದಿಯ ನೀರು ಶೀಘ್ರದಲ್ಲೇ ರೈತರ ಹೊಲಗಳಿಗೆ ತಲುಪಲಿದ್ದು, ಸಾವಿರಾರು ರೈತ ಕುಟುಂಬಗಳಲ್ಲಿ ಹೊಸ ಆಶಾಕಿರಣ ಮೂಡಿದೆ.
ಶಾಸಕ ಜಿ.ಟಿ. ಪಾಟೀಲ ಅವರು ಈ ಕುರಿತು ಮಾಹಿತಿ ನೀಡುತ್ತಾ, ಬೀಳಗಿ ಭಾಗದ ರೈತರ ದೀರ್ಘಕಾಲದ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿರುವುದು ರೈತರ ಹೋರಾಟಕ್ಕೆ ಸಂದ ಮಹತ್ವದ ಗೆಲುವಾಗಿದೆ ಎಂದು ಹೇಳಿದರು.
ಯೋಜನೆಯಡಿ ಸೊನ್ನ ಗ್ರಾಮದ ಸಮೀಪ ಕೃಷ್ಣಾ ನದಿಯಿಂದ ನೀರನ್ನು ಏತದ ಮೂಲಕ ಮೇಲಕ್ಕೆತ್ತಿ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ಹರಿಸಲಾಗುತ್ತದೆ. ಯೋಜನೆ ಪೂರ್ಣಗೊಂಡ ನಂತರ ಸುಮಾರು 7,000 ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಮಳೆ ಆಧಾರಿತ ಕೃಷಿಯ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.
ಇದರಿಂದ ಕಬ್ಬು, ಮೆಕ್ಕೆಜೋಳ, ಹತ್ತಿ, ದಾಳಿಂಬೆ ಸೇರಿದಂತೆ ವಿವಿಧ ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳ ಉತ್ಪಾದನೆ ಹೆಚ್ಚುವ ನಿರೀಕ್ಷೆಯಿದೆ. ಜೊತೆಗೆ ರೈತರ ಆದಾಯ ವೃದ್ಧಿಯಾಗಿ, ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಕೃಷಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಯೋಜನೆ ಅನುಷ್ಠಾನಗೊಂಡರೆ ಬೀಳಗಿ ತಾಲೂಕಿನ ಅನೇಕ ಗ್ರಾಮಗಳ ರೈತರಿಗೆ ವರ್ಷಪೂರ್ತಿ ನೀರಾವರಿ ಸೌಲಭ್ಯ ದೊರೆಯಲಿದ್ದು, ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಹಲವು ವರ್ಷಗಳಿಂದ ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ರೈತರಿಗೆ ಈ ಯೋಜನೆ ಶಾಶ್ವತ ಪರಿಹಾರ ನೀಡುವ ವಿಶ್ವಾಸ ವ್ಯಕ್ತವಾಗಿದೆ.
ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿರುವುದನ್ನು ಸ್ಥಳೀಯ ರೈತರು ಸ್ವಾಗತಿಸಿದ್ದು, ಕಾಮಗಾರಿಯನ್ನು ಶೀಘ್ರ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande