ಸುಸ್ಥಿರ ನಾಳೆಗಾಗಿ ಜಲ ಮತ್ತು ವಿದ್ಯುತ್ ಸಂರಕ್ಷಣೆ - ಡಾ. ಶಾಲಿನಿ ರಜನೀಶ್
ಬಳ್ಳಾರಿ, 03 ಜುಲೈ (ಹಿ.ಸ.) ಆ್ಯಂಕರ್: ಭೂಮಿ ಹಾಗೂ ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಲು ಜಲ ಮತ್ತು ವಿದ್ಯುತ್ ಸಂರಕ್ಷಣೆ ಅತ್ಯಂತ ಅಗತ್ಯವಾಗಿದ್ದು, ಸಾರ್ವಜನಿಕರು ದೈನಂದಿನ ಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬೇಕು ಎಂದು ಸರ್ಕಾರದ ಮು
ಸುಸ್ಥಿರ ನಾಳೆಗಾಗಿ ಜಲ ಮತ್ತು ವಿದ್ಯುತ್ ಸಂರಕ್ಷಣೆ - ಡಾ. ಶಾಲಿನಿ ರಜನೀಶ್


ಬಳ್ಳಾರಿ, 03 ಜುಲೈ (ಹಿ.ಸ.)

ಆ್ಯಂಕರ್: ಭೂಮಿ ಹಾಗೂ ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಲು ಜಲ ಮತ್ತು ವಿದ್ಯುತ್ ಸಂರಕ್ಷಣೆ ಅತ್ಯಂತ ಅಗತ್ಯವಾಗಿದ್ದು, ಸಾರ್ವಜನಿಕರು ದೈನಂದಿನ ಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕರೆ ನೀಡಿದ್ದಾರೆ.

ನೀರನ್ನು ಉಳಿಸುವುದು ಎಂದರೆ ವಿದ್ಯುತ್ ಅನ್ನು ಸಹ ಉಳಿಸುವುದಾಗಿದೆ. ಏಕೆಂದರೆ ನೀರನ್ನು ಶುದ್ದೀಕರಿಸಿ ಮನೆಗಳಿಗೆ ಪೂರೈಸಲು ಹೆಚ್ಚಿನ ವಿದ್ಯುತ್ ಬಳಸಲಾಗುತ್ತದೆ. ಹಾಗಾಗಿ ಈ ಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

*ಎಲ್ ನಿನೊ ಹವಾಮಾನ ವೈಪರೀತ್ಯ ಮತ್ತು ಜಲಕ್ಷಾಮದ ಭೀತಿ:*

ಪ್ರತಿಯೊಬ್ಬ ಜೀವಿಯ ಬದುಕಿಗೆ ನೀರು ಅತ್ಯಗತ್ಯವಾಗಿದ್ದು, ಭೂಮಿಯ ಶೇಕಡಾ 70 ರಷ್ಟು ಭಾಗ ನೀರಿನಿಂದ ಕೂಡಿದ್ದರೂ, ಕುಡಿಯಲು ಯೋಗ್ಯವಾದ ಸಿಹಿ ನೀರು ಇರುವುದು ಕೇವಲ ಶೇಕಡಾ 2 ರಷ್ಟು ಮಾತ್ರ. ವೇಗವಾದ ನಗರೀಕರಣ, ಜನಸಂಖ್ಯೆಯ ಹೆಚ್ಚಳ, ಮಾಲಿನ್ಯ ಮತ್ತು ಜವಾಬ್ದಾರಿರಹಿತ ಬಳಕೆಯಿಂದಾಗಿ ಜಲಕ್ಷಾಮವು ಇಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ.

ಇತ್ತೀಚಿನ ದಿನಗಳಲ್ಲಿ ಎಲ್ ನಿನೊ ಹವಾಮಾನ ವೈಪರೀತ್ಯದ ಪರಿಣಾಮದಿಂದ ವಿಶ್ವದಾದ್ಯಂತ ಸಾಮಾನ್ಯ ಹವಾಮಾನ ಮಾದರಿಗಳು ವ್ಯತ್ಯಯಗೊಳ್ಳುತ್ತಿವೆ. ದೇಶದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಬರಗಾಲದಂತಹ ತೀವ್ರ ಪರಿಸ್ಥಿತಿಗಳು ಎದುರಾಗುತ್ತಿದ್ದು, ಮಳೆಯ ಕೊರತೆಯುಂಟಾಗುತ್ತಿದೆ. ಇದು ನೇರವಾಗಿ ನಮ್ಮ ರೈತರ ಕೃಷಿ ಉತ್ಪಾದನೆ ಮತ್ತು ಪರಿಸರ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಜೀವಜಲವಾದ ನೀರನ್ನು ಉಪಯೋಗಿಸುವಾಗ ನಾಗರಿಕರು ತೀವ್ರ ಎಚ್ಚರಿಕೆ ವಹಿಸಬೇಕಾಗಿದೆ.

*ನೀರು ಉಳಿಸಲು ಪ್ರಮುಖ ಮಾರ್ಗೋಪಾಯಗಳು:*

‘ನೀರನ್ನು ಮಿತವಾಗಿ ಬಳಿಸಿ, ಪ್ರಕೃತಿಯನ್ನು ರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬ ನಾಗರಿಕನೂ ಸಣ್ಣ ಪ್ರಮಾಣದಲ್ಲಿ ನೀರನ್ನು ಉಳಿಸಿದರೆ, ನಾಳೆ ದೊಡ್ಡ ಮಟ್ಟದ ಸಂರಕ್ಷಣೆ ಸಾಧ್ಯ.

*ಅನುಸರಿಸಬೇಕಾದ ಕ್ರಮಗಳು:*

ಸೋರಿಕೆಯಾಗುತ್ತಿರುವ ಕೊಳವೆಗಳು ಮತ್ತು ನೀರು ಸಂಗ್ರಹ ವ್ಯವಸ್ಥೆಗಳನ್ನು ತಕ್ಷಣ ದುರಸ್ತಿ ಮಾಡುವುದು. ಮುಖ ಮತ್ತು ಪಾತ್ರೆ ತೊಳೆಯುವಾಗ ನಲ್ಲಿಗಳನ್ನು (ಟ್ಯಾಪ್) ಅನಗತ್ಯವಾಗಿ ತೆರೆದಿಡದಿರುವುದು. ಸ್ನಾನಕ್ಕೆ ಶವರ್ ಬದಲಾಗಿ ಬಕೆಟ್ ಬಳಸುವುದು ಮತ್ತು ನೀರು ಉಳಿತಾಯ ಮಾಡುವ ಆಧುನಿಕ ಉಪಕರಣಗಳನ್ನು ಅಳವಡಿಸುವುದು.

ಮನೆ, ಶಾಲೆ, ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹಣೆಯನ್ನು ಕಡ್ಡಾಯಗೊಳಿಸುವುದು. ಕುಡಿಯುವ ನೀರನ್ನು ತೋಟಗಾರಿಕೆ ಅಥವಾ ವಾಹನ ತೊಳೆಯಲು ಬಳಸದೆ, ತ್ಯಾಜ್ಯ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡುವುದು. ಕೃಷಿಯಲ್ಲಿ ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸುವುದು.

ಕೆರೆ, ನದಿ ಹಾಗೂ ಭೂಗರ್ಭ ಜಲಮೂಲಗಳನ್ನು ಮಾಲಿನ್ಯ ಮತ್ತು ಅತಿಕ್ರಮಣದಿಂದ ರಕ್ಷಿಸುವುದರೊಂದಿಗೆ ಅಂತರ್ಜಲ ಹೆಚ್ಚಿಸಲು ಗಿಡಗಳನ್ನು ನೆಡುವುದು.

*ವಿದ್ಯುತ್ ಸಂರಕ್ಷಣೆ: ಇಂದಿನ ಉಳಿತಾಯವೇ ನಾಳೆಯ ಭವಿಷ್ಯ*

ಆಧುನಿಕ ಜಗತ್ತಿನಲ್ಲಿ ವಿದ್ಯುತ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ವಿದ್ಯುತ್ ಅನ್ನು ಇಂದಿಗೂ ಹೆಚ್ಚಾಗಿ ಕಲ್ಲಿದ್ದಲು ಸುಡುವ ಮೂಲಕ ಉತ್ಪಾದಿಸಲಾಗುತ್ತಿರುವುದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಭೂಮಿಯ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ. ಶಕ್ತಿ ಭದ್ರತೆ ಹಾಗೂ ಪರಿಸರ ಮಾಲಿನ್ಯ ತಗ್ಗಿಸಲು ಜವಾಬ್ದಾರಿಯುತ ವಿದ್ಯುತ್ ಬಳಕೆ ಅತ್ಯಗತ್ಯವಾಗಿದೆ.

*ವಿದ್ಯುತ್ ಉಳಿತಾಯದ ಸೂತ್ರಗಳು:*

ಬಳಕೆಯಿಲ್ಲದಾಗ ದೀಪಗಳು, ಫ್ಯಾನ್ಗಳನ್ನು ಕಡ್ಡಾಯವಾಗಿ ಆರಿಸುವುದು ಹಾಗೂ ಸಾಮಾನ್ಯ ಬಲ್ಬುಗಳ ಬದಲಿಗೆ ಎಲ್ಇಡಿ ದೀಪಗಳನ್ನು ಬಳಸುವುದು. ಮೇಲ್ಮಾವಣಿ ಸೌರ ವ್ಯವಸ್ಥೆ ಹಾಗೂ ಸೋಲಾರ್ ಉಪಕರಣಗಳ ಬಳಕೆಗೆ ಆದ್ಯತೆ ನೀಡುವುದು.

ಹಗಲಿನಲ್ಲಿ ನೈಸರ್ಗಿಕ ಬೆಳಕು ಮತ್ತು ಗಾಳಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವುದು. ಮೊಬೈಲ್ ಹಾಗೂ ಇತರ ಸಾಧನಗಳ ಚಾರ್ಜರ್ಗಳನ್ನು ಬಳಕೆಯ ನಂತರ ಪ್ಲಗ್ನಿಂದ ಬೇರ್ಪಡಿಸುವುದು. ಏರ್ ಕಂಡೀಷನರ್ಗಳನ್ನು 24-26 ಡಿಗ್ರಿ ಸೆಂ. ತಾಪಮಾನದಲ್ಲಿ ನಿರ್ವಹಿಸುವುದು. ಶಾಲೆ, ಕಾಲೇಜು ಹಾಗೂ ಕಚೇರಿಗಳಲ್ಲಿ ನಿಯಮಿತವಾಗಿ ವಿದ್ಯುತ್ ಲೆಕ್ಕಪರಿಶೋಧನೆ ನಡೆಸುವುದು.

*ಜಲ-ವಿದ್ಯುತ್ ನಡುವಿನ ನಂಟು ಮತ್ತು ಜಾಗೃತಿ ಚಟುವಟಿಕೆಗಳು:*

ನಮ್ಮ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇಕಡಾ 15 ರಿಂದ 20 ರಷ್ಟು ಪಾಲು ಜಲವಿದ್ಯುತ್ ಯೋಜನೆಯಿಂದ ಬರುತ್ತದೆ. ಅಂದರೆ, ನೀರಿನ ಕೊರತೆಯಾದರೆ ದೇಶದಲ್ಲಿ ವಿದ್ಯುತ್ ಕೊರತೆಯೂ ತಾನಾಗಿಯೇ ಉಂಟಾಗುತ್ತದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ಸಾರ್ವಜನಿಕರು ಜಲ ಮತ್ತು ವಿದ್ಯುತ್ ಮಿತವ್ಯಯವನ್ನು ಸ್ವಯಂಪ್ರೇರಿತರಾಗಿ ರೂಢಿಸಿಕೊಳ್ಳಬೇಕು.

ಈ ನಿಟ್ಟಿನಲ್ಲಿ ಶಾಲೆ, ಕಾಲೇಜು ಮತ್ತು ಕಚೇರಿಗಳಲ್ಲಿ ಜಲ ಹಾಗೂ ವಿದ್ಯುತ್ ಸಂರಕ್ಷಣಾ ಪ್ರತಿಜ್ಞಾ ವಿಧಿ ಕಾರ್ಯಕ್ರಮ, ಜಾಗೃತಿ ಮೆರವಣಿಗೆಗಳು, ಬೀದಿ ನಾಟಕಗಳು ಮತ್ತು ಪೆÇೀಸ್ಟರ್ ಪ್ರದರ್ಶನಗಳನ್ನು ಆಯೋಜಿಸಬೇಕಾಗಿದೆ. ಸಮುದಾಯದ ಸಹಭಾಗಿತ್ವದೊಂದಿಗೆ ‘ಜಲ ಸಂರಕ್ಷಣಾ ವಾರ' ಮತ್ತು ‘ವಿದ್ಯುತ್ ಸಂರಕ್ಷಣಾ ದಿನ'ವನ್ನು ಆಚರಿಸಿ, ಭವಿಷ್ಯದ ಪೀಳಿಗೆಗೆ ಸುಸ್ಥಿರ ಹಾಗೂ ಸಮೃದ್ಧ ಜೀವನಮಟ್ಟವನ್ನು ಖಚಿತಪಡಿಸೋಣ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande