ರೈತರ ಸಾಲ ಮನ್ನಾ ಮಾಡಿ, ಬರಗಾಲ ಘೋಷಿಸಿ: ಸುರೇಶ ಮರಳಪ್ಪನವರ ಆಗ್ರಹ
ಗದಗ, 03 ಜುಲೈ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಸಮರ್ಪಕ ಮುಂಗಾರು ಮಳೆಯಾಗದ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಆ
ಫೋಟೋ


ಗದಗ, 03 ಜುಲೈ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಸಮರ್ಪಕ ಮುಂಗಾರು ಮಳೆಯಾಗದ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮುಂಗಾರು ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದನ್ನು ನಂಬಿಕೊಂಡು ಜಿಲ್ಲೆಯ ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಕೆಲವರು ಶೇಕಡಾ 40ರಷ್ಟು ಬಿತ್ತನೆ ಪೂರ್ಣಗೊಳಿಸಿದ್ದರೆ, ಇನ್ನೂ ಹಲವರು ಶೇಕಡಾ 60ರಷ್ಟು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಬಿತ್ತನೆ ಮಾಡಿದ ರೈತರು ಬೀಜ, ಗೊಬ್ಬರ, ಕೂಲಿ ಹಾಗೂ ಕೃಷಿ ಚಟುವಟಿಕೆಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದು, ಕಳೆದ ಹಲವು ದಿನಗಳಿಂದ ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜುಲೈ ತಿಂಗಳು ಆರಂಭವಾದರೂ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನಿರೀಕ್ಷಿತ ಮಳೆಯಾಗದಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಳೆಯ ಕೊರತೆಯಿಂದ ಮುಂಗಾರು ಬೆಳೆಗಳಾದ ಮೆಣಸಿನಕಾಯಿ, ಹೆಸರು, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗುವ ಸಾಧ್ಯತೆ ಎದುರಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಹೊಲಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಬೇಕು. ಬೆಳೆ ಹಾನಿಯ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಬರಗಾಲ ಘೋಷಣೆ ಮಾಡಬೇಕು. ಜೊತೆಗೆ ರೈತರ ಬೆಳೆಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ಕೃಷಿ ಚಟುವಟಿಕೆಗಳಿಗೆ ವಿಶೇಷ ಆರ್ಥಿಕ ನೆರವು ಘೋಷಿಸಬೇಕು. ಇಲ್ಲವಾದರೆ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಣೆಕಟ್ಟುಗಳ ನೀರನ್ನು ನಂಬಿಕೊಂಡು ಬಿತ್ತನೆ ಮಾಡಬೇಡಿ ಎಂದು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಸುರೇಶ ಮರಳಪ್ಪನವರ, ಒಂದು ಕಡೆ ಮಳೆಯ ಕೊರತೆ, ಮತ್ತೊಂದು ಕಡೆ ಜಲಾಶಯಗಳಲ್ಲಿ ಸಮರ್ಪಕ ನೀರಿನ ಅಭಾವ ಇರುವ ಪರಿಸ್ಥಿತಿಯಲ್ಲಿ ರೈತರು ಯಾವ ಆಶ್ರಯದಲ್ಲಿ ಕೃಷಿ ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಹೇಳಿದ್ದಾರೆ. ಸರ್ಕಾರ ಕೇವಲ ಸಲಹೆ ನೀಡುವುದಕ್ಕಿಂತ ರೈತರ ಸಂಕಷ್ಟ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಅಗತ್ಯ ಪ್ರಮಾಣದ ಹಣ ಲಭ್ಯವಿದ್ದು, ಅದನ್ನು ಸಮರ್ಪಕವಾಗಿ ಬಳಸಿದರೆ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ನೆರವು ಪಡೆಯಲು ಅವಕಾಶವಿದೆ ಎಂದು ಹೇಳಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ವಿಳಂಬ ಮಾಡದೆ ಬರಗಾಲ ಘೋಷಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸುವುದರ ಜೊತೆಗೆ ರೈತರಿಗೆ ಆರ್ಥಿಕ ನೆರವು, ಬೆಳೆ ಪರಿಹಾರ ಹಾಗೂ ಸಾಲಮನ್ನಾ ಸೌಲಭ್ಯಗಳನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೈತರು ರಾಜ್ಯದ ಬೆನ್ನೆಲುಬಾಗಿದ್ದು, ಅವರ ಬದುಕು ಸಂಕಷ್ಟಕ್ಕೆ ಸಿಲುಕಿದರೆ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಆದ್ದರಿಂದ ಸರ್ಕಾರ ರಾಜಕೀಯವನ್ನು ಬದಿಗೊತ್ತಿ ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು. ಗದಗ ಜಿಲ್ಲೆಯ ರೈತರ ಸಮಸ್ಯೆಗಳನ್ನು ತುರ್ತು ಆಧಾರದ ಮೇಲೆ ಪರಿಹರಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕೆಂದು ಸುರೇಶ ಮರಳಪ್ಪನವರ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande