
ಬಳ್ಳಾರಿ, 03 ಜುಲೈ (ಹಿ.ಸ.)
ಆ್ಯಂಕರ್ : ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿರುವ 2ನೇ ರೈಲ್ವೇ ಗೇಟ್ ಹತ್ತಿರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಪವಿಭಾಗದ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ದೂರುದಾರರಾದ ವೀರೇಶ್ (ತಂದೆ ಹುಸೇನಪ್ಪ, 27 ವರ್ಷ), ರಾಮರಾಜು ರವರ ರಿಯಲ್ ಎಸ್ಟೇಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಗನಕಲ್ಲು ರಸ್ತೆಯ ವಡ್ಡೆ ಗೋವಿಂದಪ್ಪ ಅವರಿಗೆ ಸೇರಿದ ಸರ್ವೆ ನಂ: 78/3 ರ 2.47 ಎಕರೆ ಜಮೀನಿನ ಬಹು ನಿವೇಶನ ವಿನ್ಯಾಸಕ್ಕೆ, ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸುವ ಸರ್ಕಾರಿ ಕೆಲಸಕ್ಕಾಗಿ ಎ.ಇ ಅಶೋಕ್ ಎಸ್. ಅವರು 55,000 ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ವೀರೇಶ್ ಅವರು ಬಳ್ಳಾರಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು (ಅಪರಾಧ ಸಂಖ್ಯೆ: 07/2026 ಕಲಂ 7(ಎ) ಪಿಸಿ ಆಕ್ಟ್ 1988).
ಲೋಕಾಯುಕ್ತ ದಾಳಿ ಮತ್ತು ದಸ್ತಗಿರಿ:
ದೂರಿನ ಅನ್ವಯ ಜು.03 ರಂದು ಮಧ್ಯಾಹ್ನ ಸುಮಾರು 12.30ರ ವೇಳೆಗೆ ಲೋಕಾಯುಕ್ತ ಪೊಲೀಸರು ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ದೂರುದಾರರಿಂದ ಪಡೆದ 55,000 ರೂ. ಲಂಚದ ಹಣದಲ್ಲಿ 27,500 ರೂ. ಗಳನ್ನು ಅಶೋಕ್ ಎಸ್. ಅವರು ತಮ್ಮ ಮೇಲಾಧಿಕಾರಿಯಾದ ಎ.ಇ.ಇ. ಕಾಶಿ ವಿಶ್ವನಾಥ್ ಅವರಿಗೆ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ಕಚೇರಿಯಲ್ಲೇ ರೆಡ್ಹ್ಯಾಂಡ್ ಆಗಿ ದಸ್ತಗಿರಿ ಮಾಡಿದ್ದಾರೆ. ಇಬ್ಬರ ಬಳಿಯಿಂದಲೂ ತಲಾ 27,500 ರೂ.ಗಳ ಲಂಚದ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಕಾರ್ಯಾಚರಣೆ ತಂಡ:
ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕರುಗಳಾದ ಗುರಣ್ಣ ಎಸ್ ಹೆಬ್ಬಾಳ್ ಮತ್ತು ಸುರೇಶ್ ಎಂ ಭಾವಿಮನಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಚಂದ್ರಶೇಖರ್, ವಸಂತಕುಮಾರ್, ಅರವಿಂದ, ಅಂಜಿನಪ್ಪ, ಹನುಮಂತಪ್ಪ, ಪ್ರಕಾಶ್ ಎಂ., ನಜೀಮ್ ಶೇಖ್, ಗೊಲ್ಲರ ದಾಸಪ್ಪ, ಹೊನ್ನೂರಪ್ಪ ಕೆ.ಟಿ ಮತ್ತು ಹರೀಶ್.ವಿ ಅವರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್