
ರಾಯಚೂರು, 03 ಜುಲೈ (ಹಿ.ಸ.)
ಆ್ಯಂಕರ್: ಕಳೆದ 15 ವರ್ಷಗಳಿಂದ ದೇಶದಲ್ಲಿ ಶೂನ್ಯ ಪೋಲಿಯೋ ಪ್ರಕರಣ ಸಾಧನೆ ಹಾಗೂ ಪೋಲಿಯೋ ಮೇಲಿನ ನಮ್ಮ ವಿಜಯವನ್ನು ಮುಂದುವರೆಸಲು ರಾಯಚೂರು ಜಿಲ್ಲೆಯಾದ್ಯಂತ ಜೂನ್ 28ರಂದು ಒಂದದಿನದ ಹಾಗೂ ಮನೆ ಭೇಟಿಯ ಮೂಲಕ ಹುಟ್ಟಿನಿಂದ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿಯನ್ನು ಶೇ.100ರಷ್ಟು ಸಾಧನೆಯೊಂದಿಗೆ ಯಶಸ್ವಿಗೊಳಿಸಲಾಗಿದೆ ಎಂದು ಪೋಲಿಯೋ ರಾಜ್ಯ ನೋಡಲ್ ಅಧಿಕಾರಿ ಆಗಿರುವ ಕಲಬುರಗಿ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕರಾದ ಡಾ.ಎ.ಎಸ್.ರುದ್ರವಾಡಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಕೊನೆಯ ದಿನದಂದು ರಾಷ್ಟಿಯ ವೈದ್ಯರ ದಿನವು ಇದ್ದುದರಿಂದ ವೈದ್ಯರ ನಿಸ್ವಾರ್ಥ ಸೇವೆಗೆ ಎಲ್ಲರೂ ಗೌರವ ಸಲ್ಲಿಸುವ ಈ ಸಂದರ್ಭದಲ್ಲಿ ಮಕ್ಕಳ ಅಂಗವಿಕಲತೆ ತಡೆಯುವ ಪಲ್ಪ್ ಪೋಲಿಯೋ ಕಾರ್ಯಕ್ರಮದ ಯಶಸ್ವಿಗೆ ಬೆನ್ನುಲುಬಾಗಿ ಮಾರ್ಗದರ್ಶನ ನೀಡಿದ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಅಡಳಿತ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು, ವೈದ್ಯಕೀಯ, ಪ್ಯಾರಾ ಮೆಡಿಕಲ್ ಕಾಲೇಜು ಮುಖ್ಯಸ್ಥರು, ರಸ್ತೆ ಸಾರಿಗೆ ಸಂಸ್ಥೆ, ರೈಲ್ವೆ ಇಲಾಖೆ, ವ್ಯಾಪಕ ಪ್ರಚಾರ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಅರ್ಪಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು, ಪೋಲಿಯೋ ಅನುಷ್ಟಾನ ಅಧಿಕಾರಿ ಹಾಗೂ ಆರ್ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್, ಡಾ.ಗಣೇಶ್, ಡಾ.ಶಿವಕುಮಾರ ನಾರಾ, ಕೆ, ಡಾ.ಮಹಮ್ಮದ್ ಶಾಕೀರ್, ಡಾ.ಚಂದ್ರಶೇಖರಯ್ಯ ಸೇರಿದಂತೆ ಸಿಬ್ಬಂದಿಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್