ಗಿರಿಜನರ ಕಲ್ಯಾಣ ನಿಧಿ ದುರುಪಯೋಗ: ಅಡ್ನೂರ
ಗದಗ, 03 ಜುಲೈ (ಹಿ.ಸ.) ಆ್ಯಂಕರ್: ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿರಿಸಿರುವ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿದ್ದು, ಗಿರಿಜನ ಸಮುದಾಯದ ಅಭಿವೃದ್ಧಿಗೆ ತೀವ್ರ ಅನ್ಯಾಯ ಎಸಗಿದೆ ಎಂದು ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡಗಳ ಮೋರ್ಚಾದ ಗದಗ ಜಿಲ್ಲಾ ಅಧ್ಯಕ್ಷ ವೈ.ಪಿ. ಅಡ
ಫೋಟೋ


ಗದಗ, 03 ಜುಲೈ (ಹಿ.ಸ.)

ಆ್ಯಂಕರ್: ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿರಿಸಿರುವ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿದ್ದು, ಗಿರಿಜನ ಸಮುದಾಯದ ಅಭಿವೃದ್ಧಿಗೆ ತೀವ್ರ ಅನ್ಯಾಯ ಎಸಗಿದೆ ಎಂದು ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡಗಳ ಮೋರ್ಚಾದ ಗದಗ ಜಿಲ್ಲಾ ಅಧ್ಯಕ್ಷ ವೈ.ಪಿ. ಅಡ್ನೂರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗಿರಿಜನ ಸಮುದಾಯಕ್ಕೆ ಆರ್ಥಿಕ ವಂಚನೆ ಮಾಡಿದೆ ಎಂದು ದೂರಿದರು. 2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಎಸ್ಸಿಎಸ್ಪಿ–ಟಿಎಸ್ಪಿ ಯೋಜನೆಯಡಿ ಮೀಸಲಿರಿಸಲಾಗಿದ್ದ ₹44,632 ಕೋಟಿ ಅನುದಾನದಲ್ಲಿ ₹15,066.46 ಕೋಟಿ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಎಸ್ಸಿಎಸ್ಪಿ–ಟಿಎಸ್ಪಿ ಕಾಯ್ದೆಯ ಸೆಕ್ಷನ್ 7(ಅ) ನಿಯಮಗಳಿಗೆ ವಿರುದ್ಧವಾಗಿ ಈ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದ ಅಡ್ನೂರ, ಇದರ ಪರಿಣಾಮವಾಗಿ ಗದಗ ಜಿಲ್ಲೆಯ ರೋಣ, ಮುಂಡರಗಿ, ನರಗುಂದ ಹಾಗೂ ಶಿರಹಟ್ಟಿ ತಾಲೂಕುಗಳ ಗಿರಿಜನ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಸಮುದಾಯ ಭವನ ಸೇರಿದಂತೆ ಅನೇಕ ಮೂಲಸೌಕರ್ಯ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಹೇಳಿದ್ದಾರೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣವನ್ನು ಉಲ್ಲೇಖಿಸಿದ ಅವರು, ಬಡ ಗಿರಿಜನರ ಅಭಿವೃದ್ಧಿಗೆ ಬಳಸಬೇಕಿದ್ದ ₹89.63 ಕೋಟಿ ಸಾರ್ವಜನಿಕ ಹಣವನ್ನು ಅಕ್ರಮವಾಗಿ ಖಾಸಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ) ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ 30 ಮಂದಿ ಆರೋಪಿಗಳ ಹೆಸರಿದೆ ಎಂದು ಅವರು ಹೇಳಿದರು. ಈ ಪ್ರಕರಣ ಕಾಂಗ್ರೆಸ್ ಸರ್ಕಾರದ ಗಿರಿಜನ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಗಿರಿಜನ ಅಲೆಮಾರಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮಂಡಳಿಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ಸರ್ಕಾರ ಕಡಿತಗೊಳಿಸಿದ್ದು, ಇದರಿಂದ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಅವರು ದೂರಿದರು.

ಪರಿಶಿಷ್ಟ ಪಂಗಡಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶೇಕಡಾ 7ರಷ್ಟು ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಸಮರ್ಥಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಅಡ್ನೂರ ಆರೋಪಿಸಿದರು. ಆಡಳಿತಾತ್ಮಕ ಆದೇಶಗಳ ಮೂಲಕ ಮೀಸಲಾತಿಯನ್ನು ಮತ್ತೆ ಶೇಕಡಾ 3ಕ್ಕೆ ಇಳಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅವರು ಆಪಾದಿಸಿದರು.

ಶಿಕ್ಷಣ ಕ್ಷೇತ್ರದಲ್ಲಿಯೂ ಗಿರಿಜನ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಹಿಂದೆ ಜಾರಿಯಲ್ಲಿದ್ದ ನೇರ ಶುಲ್ಕ ವಿನಾಯಿತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಮರುಪಾವತಿ ಪದ್ಧತಿ ಜಾರಿಗೊಳಿಸಿರುವುದರಿಂದ ಬಡ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಗದಗ ಜಿಲ್ಲೆಯ ವಿವಿಧ ಪರಿಶಿಷ್ಟ ಪಂಗಡಗಳ ಆಶ್ರಮ ಶಾಲೆಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಮುಂದುವರಿದಿದ್ದು, ಸರ್ಕಾರ ಈ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟ ಅಡ್ನೂರ, ಎಸ್ಸಿಎಸ್ಪಿ–ಟಿಎಸ್ಪಿ ನಿಧಿಯಿಂದ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿರುವ ₹15,066.46 ಕೋಟಿ ಅನುದಾನವನ್ನು ಮರುಪಡೆಯಿಸಿ ಗಿರಿಜನರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು ಎಂದು ಒತ್ತಾಯಿಸಿದರು. ಶೇಕಡಾ 7ರ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ರಕ್ಷಿಸಲು ಹಿರಿಯ ವಕೀಲರ ತಂಡವನ್ನು ನೇಮಿಸಬೇಕು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಲಾಗಿರುವ ಹಣವನ್ನು ವಸೂಲಿ ಮಾಡಿ ಗಿರಿಜನ ಯುವಕರ ಉದ್ಯೋಗ ಮತ್ತು ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸದಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ. ವಿಜಯೇಂದ್ರ ಹಾಗೂ ರಾಜ್ಯ ಪರಿಶಿಷ್ಟ ಪಂಗಡಗಳ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಅವರ ನೇತೃತ್ವದಲ್ಲಿ ಗದಗ ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವೈ.ಪಿ. ಅಡ್ನೂರ ಎಚ್ಚರಿಕೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande