




ರಾಯಚೂರು, 03 ಜುಲೈ (ಹಿ.ಸ.)
ಆ್ಯಂಕರ್: ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಮತದಾನ ದೇಶದ ಭವಿಷ್ಯ ನಿರ್ಧರಿಸುವ ಪವಿತ್ರ ಕರ್ತವ್ಯವಾಗಿದೆ. ಜಿಲ್ಲೆಯ ಎಲ್ಲ ಅರ್ಹ ಮತದಾರರು ತಮ್ಮ ತಮ್ಮ ಹೆಸರನ್ನು ಈ ಪರಿಷ್ಕರಣೆಯ ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಹೇಳಿದರು.
ವಿಶೇಷ ಮತದಾರರ ತೀವ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮದ ಅಂಗವಾಗಿ ರಾಯಚೂರಿನ ಹರಬ್ ಮೊಹಲ್ಲಾ, ಸಿಯಾತಲಾಬ್ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಮತ್ತು ಸಂಸದ ಕುಮಾರ ನಾಯಕರು ಭಾಗವಹಿಸಿ ಮತ ಪರಿಷ್ಕರಣೆ ಬಗ್ಗೆ ವಿವರಿಸಿ ಜಾಗೃತಿ ಮೂಡಿಸಿದರು.
ನಿನ್ನೆ ನಾನು ಈ ಮತದಾರ ಪರಿಷ್ಕರಣೆಯಲ್ಲಿ ಭಾಗವಹಿಸಿ, ನನ್ನ ಎಲ್ಲಾ ವಿವರಗಳೊಂದಿಗೆ ಫಾರಂ ಬರ್ತಿ ಮಾಡಿ ಸ್ವವಿವರ ನೀಡಿದ್ದೇನೆ ಯಾರೂ ಸಹ ಈ ಪ್ರಕ್ರಿಯೆಯಿಂದ ದೂರ ಸರಿಯಬಾರದು. ಅರ್ಹರಿಗೆ ಗ್ಯಾರಂಟಿ ಯೋಜನೆಗಳು ತಲುಪಲು ಈ ಮತದಾರ ಪಟ್ಟಿ ಪರಿಷ್ಕರಣೆ ಅಗತ್ಯವಾಗಿದೆ ಎಂದು ಮತದಾರರಿಗೆ ಎನ್ಎಸ್ ಬೋಸರಾಜು ಮನವರಿಕೆ ಮಾಡಿದರು.
ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಿಸಬೇಕು. ಮತದಾರರ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ತಿದ್ದುಪಡಿ, ವಯಸ್ಸು ಮತ್ತು ಗುರುತಿನ ವಿವರಗಳ ಪರಿಶೀಲನೆ ಸೇರಿದಂತೆ ಎಲ್ಲ ಮಾಹಿತಿಯೂ ಸರಿಯಾಗಿ ನೀಡಬೇಕು ಎಂದು ತಿಳಿಸಿದರು.
ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು, ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಹಕರಿಸುವುದು ಮತ್ತು ಯಾವುದೇ ತಪ್ಪು ಮಾಹಿತಿ ಕಂಡುಬಂದರೆ ತಕ್ಷಣ ಸರಿಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಈ ಪ್ರಕ್ರಿಯೆಯಲ್ಲಿ ಬಿಎಲ್ ಓ ಹಾಗೂ ಬಿಎಲ್ ಎ - 2 ಗಳ ಸಮನ್ವಯತೆ ಮುಖ್ಯವಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರ ಹೆಸರು ಕೈಬಿಡದಂತೆ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಯಕರ್ತರು, ಬೂತ್ ಏಜೆಂಟ್ಗಳು ಹಾಗೂ ಸಂಬಂಧಿತ ಅಧಿಕಾರಿಗಳು ಸಮನ್ವಯದಿಂದ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷವಾಗಿ ಯುವ ಮತದಾರರು, ಮಹಿಳೆಯರು, ವಲಸೆ ಬಂದವರು ಮತ್ತು ಹೊಸದಾಗಿ ಮತದಾನದ ಅರ್ಹತೆ ಪಡೆದಿರುವವರು ತಮ್ಮ ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ತಕ್ಷಣ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು, ತಪ್ಪು ದಾಖಲೆ ಹೊಂದಿರುವವರು ಅಥವಾ ಸ್ಥಳಾಂತರಗೊಂಡವರು ನಿರ್ಲಕ್ಷ್ಯ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಮತ್ತು ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು; ಯಾವುದೇ ಅರ್ಹ ಮತದಾರರನ್ನು ಕೈಬಿಡದಂತೆ ಎಲ್ಲರೂ ಜಾಗರೂಕರಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಜಯವಂತರಾವ್ ಪತಂಗೆ, ಯುಸೂಫ ಖಾನ್, ಜಿಂದಪ್ಪ, ದೇವರಾಜ್, ತಿಮ್ಮಪ್ಪ ಬಿಲ್ ಒ, ಬೂತ್ ಮಟ್ಟದ ಏಜೆಂಟ್ಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್