

ಕೊಪ್ಪಳ, 03 ಜುಲೈ (ಹಿ.ಸ.)
ಆ್ಯಂಕರ್ : ಮುನಿರಾಬಾದ ಡ್ಯಾಂ ಸ್ಪಿಲ್ ವೇ ಗೇಟ್ ಉದ್ಘಾಟನೆ ಮಾಡಲು ಬಂದ ಮುಖ್ಯಮಂತ್ರಿಗಳು ಡಿ.ಕೆ.ಶಿವಕುಮಾರ್ ಕೇವಲ ಮೂರು ಕಿ.ಮೀ. ದೂರದ ಹಿರೇಬಗನಾಳ ಗ್ರಾಮಕ್ಕೆ ಭೇಟಿ ಕೊಡದೆ ಹೋದರು.
ತುಂಗಭದ್ರಾ ಯೋಜನೆ ಬಗ್ಗೆ ಬರಿ ಮಾತನಾಡಿ ಹೋದರೆ ಸಾಲದು. ತುಂಗಭದ್ರಾ ನೀರು ರೈತರನ್ನು ವಂಚಿಸಿ ಕಾರ್ಖಾನೆಗಳಿಗೆ ಕೊಟ್ಟು, ಆ ಕಾರ್ಖಾನೆಗಳ ಮಾಲಿನ್ಯ ನದಿ ನೀರಿಗೆ ಬೆರಸಿ ಜನರನ್ನು ರೋಗಗ್ರಸ್ಥರನ್ನಾಗಿಸಿ ಸಾಧನೆಯ ಮಾತನಾಡಿದರೆ ಏನು ಪ್ರಯೋಜನ ಎಂದು ವಕೀಲ ರಾಜು ಬಾಕಳೆ ಸರ್ಕಾರದ ವಿರುದ್ಧ ಅಸಮಾದಾನ ಹೊರಹಾಕಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಗರಸಭೆ ಮುಂದೆ 246ನೇ ದಿನದಲ್ಲಿ ಬಲ್ಡೋಟ ಹಟಾವೋ ಧರಣಿ ಹೋರಾಟ ಮುಂದುವರೆದಿದೆ.
ಕೊಪ್ಪಳ ಕಾರ್ಖಾನೆಗಳ ಮಾಲಿನ್ಯ ಸಮಸ್ಯೆ ಎಷ್ಟು ಗಂಭೀರವಾದದ್ದು ಎಂದು ಗೊತ್ತಿದ್ದೂ ಇಲ್ಲಿನ ಜನಪ್ರತಿನಿಧಿಗಳು ಅದು ನಮ್ಮ ಸಮಸ್ಯೆ ಅಲ್ಲ ಎನ್ನುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಇವರನ್ನು ಬಾಧಿತ ಜನರು ಗಂಭೀರವಾಗಿ ನೋಡುತ್ತಿದ್ದಾರೆ. ಜನರ ಸಂಕಷ್ಟ ಪರಿಹರಿಸಲು ಧಾವಿಸಿ ಬರದಿದ್ದರೆ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ.
ಇದೇ ಜುಲೈ 7ರಂದು ಮಲಗಿ ನಿದ್ದೆ ಮಾಡುತ್ತಿರುವ ಅಧಿಕಾರಿಗಳನ್ನು ಎಚ್ಚರಿಸಲು ಮತ್ತು ಭೂಮಿ ಕಿತ್ತುಕೊಂಡು ಉಣ್ಣುವ ತಟ್ಟೆಗೆ ಮಣ್ಣಾಕಬೇಡಿ ಎಂದು ಬೆಳಗ್ಗೆ 10ಗಂಟೆಗೆ ಧರಣಿ ಸ್ಥಳದಿಂದ ಹಳೆ ಜಿಲ್ಲಾ ಪಂಚಾಯತ್ ಆವರಣದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ವರೆಗೆ ಉಣ್ಣುವ ತಟ್ಟೆ ಬಾರಿಸುತ್ತಾ, ಡೊಳ್ಳು, ಹಲಗೆ, ನಗಾರಿ, ಶಂಖ, ಕಹಳೆ ಊದುತ್ತಾ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ನಗರ ಮತ್ತು ಬಾಧಿತ ಹಳ್ಳಿಗಳ ಜನರು ದೊಡ್ಡ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕೆಂದು ಜನತೆಗೆ ಕರೆ ನೀಡಿದರು.
ಧರಣಿಯಲ್ಲಿ ಬೆಳಕು ಸಹಕಾರಿ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ದ್ಯಾಮಣ್ಣ ಕರಿಗಾರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಎಏಳುಭಾವಿ, ಶಿವಾನಂದಯ್ಯ ಬೀಳಗಿಮಠ, ಮೂಕಪ್ಪ ಮೇಸ್ತ್ರಿ ಬಸಾಪುರ, ವೆಂಕಣ್ಣಾಚಾರ ಭೀಮಾಚಾರ ಕಟ್ಟಿ, ಎಚ್.ಶ್ರೀನಿವಾಸ ಕಾಸನಕಂಡಿ, ವಿಜಯಲಕ್ಷ್ಮಿ ಗುತ್ತೇದಾರ, ಕಾಶಪ್ಪ ಚಲವಾದಿ, ಮಲ್ಲಪ್ಪ ಎಸ್. ಮಾದಿನೂರು, ರಮೇಶ ಪಿ. ಭಜಂತ್ರಿ, ಶಿವಪ್ಪ ಜಲ್ಲಿ, ಅನಿಲ ಈಳಗೇರ, ಭೀಮಪ್ಪ ಯಲಬುರ್ಗಾ ಇನ್ನು ಅನೇಕರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್