ಕಾವೇರಿ ನೀರು ಬಿಡುಗಡೆ ಆದೇಶ: ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ;ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, 29 ಜುಲೈ (ಹಿ.ಸ.): ಆ್ಯಂಕರ್: ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ನಂತೆ 15 ದಿನಗಳ ಕಾಲ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಪ್ರಶ್ನಿಸಿ, ಕೂಡಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಅಧಿಕೃತವಾಗಿ ಮೇಲ್ಮನವಿ ಸಲ್ಲಿಸಲಾಗುವುದು ಎಂ
ಸಂದರ್ಭಿಕ ಚಿತ್ರ


ಬೆಂಗಳೂರು, 29 ಜುಲೈ (ಹಿ.ಸ.):

ಆ್ಯಂಕರ್:

ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ನಂತೆ 15 ದಿನಗಳ ಕಾಲ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಪ್ರಶ್ನಿಸಿ, ಕೂಡಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಅಧಿಕೃತವಾಗಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜಲಾಶಯಗಳಲ್ಲಿ ಮಳೆಯಿಲ್ಲದೆ ನೀರಿನ ಸಂಗ್ರಹ ಸಂಪೂರ್ಣವಾಗಿ ಕುಸಿದಿದ್ದು, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರೆರಾಜ್ಯ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದಿದ್ದಾರೆ.

ರಾಜ್ಯದಲ್ಲಿ ಮಳೆಯಿಲ್ಲ, ಕುಡಿಯುವ ನೀರಿಗೇ ಪರದಾಟ!

ರಾಜ್ಯದಲ್ಲಿನ ಮಳೆಯ ಕೊರತೆಯ ಬಗ್ಗೆ ಅಂಕಿಅಂಶ ಸಹಿತ ವಿವರಿಸಿದ ಸಚಿವರು, ಈ ಬಾರಿ ಕಾವೇರಿ ಬೇಸಿನ್ನಲ್ಲಿ ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಕೇವಲ ಮೂರರಷ್ಟು ಮಾತ್ರ ಮಳೆಯಾಗಿದೆ. ಒಟ್ಟು ನಾಲ್ಕು ಜಲಾಶಯಗಳಲ್ಲಿ ಸದ್ಯ ಡೆಡ್ ಸ್ಟೋರೇಜ್ ಸೇರಿ ಕೇವಲ 46 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಡಗಿನಿಂದ ಹಿಡಿದು ನಮ್ಮ ರಾಜಧಾನಿ ಬೆಂಗಳೂರು ಸೇರಿದಂತೆ ಸುಮಾರು 10 ರಿಂದ 12 ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ಮತ್ತು ನದಿ ಪಾತ್ರದ ಅವಶ್ಯಕತೆಗಳಿಗಾಗಿ ಪ್ರತಿ ತಿಂಗಳು ಕನಿಷ್ಠ ಮೂರೂವರೆ ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ, ನಮ್ಮ ಜನರಿಗೆ ಕುಡಿಯಲು ನೀರಿಲ್ಲದಿರುವಾಗ ಸಮಿತ ಆದೇಶವನ್ನು ಯಥಾವತ್ತಾಗಿ ಪಾಲಿಸುವುದು ಕಷ್ಟಸಾಧ್ಯ.

ಈ ಹಿನ್ನೆಲೆಯಲ್ಲಿ ಇಂದೇ ಮೇಲ್ಮನವಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.

ಆರ್ ಅಶೋಕ್ ಟೀಕೆಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ತಿರುಗೇಟು

ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಸರಿಯಾಗಿ ವಾದ ಮಂಡಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಡಿರುವ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ಕಾವೇರಿ ವಿಚಾರದಲ್ಲಿ ಕಳೆದ 25-30 ವರ್ಷಗಳಿಂದಲೂ ಶ್ರೀರಾಮಯ್ಯ ಅವರೇ ನಮ್ಮ ಇಲಾಖೆಗೆ ಕಾನೂನು ಸಲಹೆಗಾರರಾಗಿದ್ದಾರೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಅವರೇ ಅಡ್ವೈಸರ್ ಆಗಿದ್ದರು, ಈಗ ನಮ್ಮ ಸರ್ಕಾರದಲ್ಲೂ ಅವರೇ ಮುಂದುವರಿದಿದ್ದಾರೆ. ಹಾಗೆಯೇ ಹಿರಿಯ ವಕೀಲ ಮೋಹನ್ ಕಾತರಕಿ ಕೂಡ ಹಲವು ದಶಕಗಳಿಂದ ನಮ್ಮ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತ ಬಂದಿದ್ದಾರೆ. ಹೀಗಾಗಿ ವಾದ ಮಂಡನೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾವೇರಿ ನಿಯಂತ್ರಣ ಸಮಿತಿಯ ಈ ಅನ್ಯಾಯದ ಆದೇಶದ ವಿರುದ್ಧ ಇಂದು ಸಂಜೆ ವೇಳೆಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಲಿದ್ದು, ನಾಡಿನ ರೈತರ ಹಾಗೂ ಜನರ ಹಿತ ಕಾಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕಾನೂನು ಹೋರಾಟವನ್ನು ಮುಂದುವರಿಸಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande