
ನವದೆಹಲಿ, 29 ಜುಲೈ (ಹಿ.ಸ.):
ಆ್ಯಂಕರ್:
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿ ಕರ್ನಾಟಕ ಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಅಡ್ವೊಕೇಟ್ ಜನರಲ್, ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮೇಲ್ಮನವಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಬಾರಿ ರಾಜ್ಯದಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಈ ಹಿಂದೆ ತಮಿಳುನಾಡಿನ ಮನವಿಯನ್ನು ಎರಡು ಬಾರಿ ತಿರಸ್ಕರಿಸಿದ್ದ ಸಮಿತಿ, ಇದೀಗ ನೀರು ಹರಿಸಲು ಸೂಚಿಸಿರುವುದು ರಾಜ್ಯದ ಹಿತದೃಷ್ಟಿಯಿಂದ ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿಗೆ ಮರಳಿದ ಬಳಿಕ ಈ ವಿಷಯವಾಗಿ ವಿರೋಧ ಪಕ್ಷದ ನಾಯಕರೊಂದಿಗೆ ಸಹ ಸಮಾಲೋಚನೆ ನಡೆಸುವುದಾಗಿ ತಿಳಿಸಿದ ಅವರು, ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆಯಲಾಗುವುದು ಎಂದರು.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಮಾತುಕತೆಗೆ ಆಸಕ್ತಿ ವ್ಯಕ್ತಪಡಿಸಿದ್ದು, ಮುಖ್ಯ ಕಾರ್ಯದರ್ಶಿಗಳ ಮೂಲಕ ಪತ್ರ ಬರೆದು ದೂರವಾಣಿಯಲ್ಲೂ ಸಂಪರ್ಕಿಸಿದ್ದಾರೆ. ಅವರಿಗೆ ಗೌರವಪೂರ್ವಕವಾಗಿ ರಾಜ್ಯಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಅಲ್ಲದೆ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸುವಂತೆ ಮನವಿ ಮಾಡಿದ್ದು, ಅಗತ್ಯವಿದ್ದರೆ ಹೆಲಿಕಾಪ್ಟರ್ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII