ಹುಲಿ ಉಳಿದರೆ ಕಾಡು,ಕಾಡು ಉಳಿದರೆ ನಾಡು
ಬೆಂಗಳೂರು, 29 ಜುಲೈ (ಹಿ.ಸ.): ಹುಲಿ ಉಳಿದರೆ ಕಾಡು,ಕಾಡು ಉಳಿದರೆ ನಾಡು ಪ್ರತಿ ವರ್ಷ ಜುಲೈ 29ರಂದು ವಿಶ್ವದಾದ್ಯಂತ ರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. 2010ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಜಾಗತಿಕ ಹುಲಿ ಶೃಂಗಸಭೆಯಲ್ಲಿ ಈ ದಿನವನ್ನು ಘೋಷಿಸಲಾಯಿತು. ಕಾಡಿನ ಪರಿಸರ
ಹುಲಿ ಅಂತರ್ಜಾಲ ಚಿತ್ರ


ಬೆಂಗಳೂರು, 29 ಜುಲೈ (ಹಿ.ಸ.):

ಹುಲಿ ಉಳಿದರೆ ಕಾಡು,ಕಾಡು ಉಳಿದರೆ ನಾಡು

ಪ್ರತಿ ವರ್ಷ ಜುಲೈ 29ರಂದು ವಿಶ್ವದಾದ್ಯಂತ ರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. 2010ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಜಾಗತಿಕ ಹುಲಿ ಶೃಂಗಸಭೆಯಲ್ಲಿ ಈ ದಿನವನ್ನು ಘೋಷಿಸಲಾಯಿತು. ಕಾಡಿನ ಪರಿಸರ ಸಮತೋಲನವನ್ನು ಕಾಪಾಡುವ ಹುಲಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

ಹುಲಿ ಭಾರತದ ರಾಷ್ಟ್ರೀಯ ಪ್ರಾಣಿಯಾಗಿದ್ದು, ನಮ್ಮ ದೇಶದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಹೆಮ್ಮೆಯ ಸಂಕೇತವಾಗಿದೆ. ಆದರೆ ಅಕ್ರಮ ಬೇಟೆ, ಅರಣ್ಯ ನಾಶ, ಮಾನವ-ವನ್ಯಜೀವಿ ಸಂಘರ್ಷ ಹಾಗೂ ವಾಸಸ್ಥಳದ ಕೊರತೆಯಿಂದ ಹುಲಿಗಳ ಸಂಖ್ಯೆ ಒಂದು ಕಾಲದಲ್ಲಿ ತೀವ್ರವಾಗಿ ಕುಸಿದಿತ್ತು. ಈ ಹಿನ್ನೆಲೆ ಭಾರತ ಸರ್ಕಾರ 1973ರಲ್ಲಿ 'ಪ್ರಾಜೆಕ್ಟ್ ಟೈಗರ್' ಯೋಜನೆಯನ್ನು ಆರಂಭಿಸಿತು. ಇದರ ಪರಿಣಾಮವಾಗಿ ದೇಶದ ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಬಂಡಿಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿ ಮತ್ತು ಕಾಳಿ ಸೇರಿದಂತೆ ಹಲವು ಹುಲಿ ಸಂರಕ್ಷಿತ ಪ್ರದೇಶಗಳು ರಾಜ್ಯದ ಹೆಮ್ಮೆಯಾಗಿವೆ. ಇವು ಹುಲಿಗಳಷ್ಟೇ ಅಲ್ಲದೆ ಅನೇಕ ಅಪರೂಪದ ವನ್ಯಜೀವಿಗಳಿಗೂ ಸುರಕ್ಷಿತ ಆಶ್ರಯವಾಗಿವೆ.

ಹುಲಿ ಆಹಾರ ಸರಪಳಿಯ ಅತ್ಯುನ್ನತ ಪ್ರಾಣಿಯಾಗಿದ್ದು, ಅದರ ಅಸ್ತಿತ್ವವೇ ಅರಣ್ಯದ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಹುಲಿಗಳ ಸಂಖ್ಯೆ ಹೆಚ್ಚಾದರೆ ಅರಣ್ಯ ಸಮೃದ್ಧವಾಗಿದೆ ಎಂಬುದಕ್ಕೆ ಅದು ಸೂಚಕವಾಗಿದೆ. ಆದ್ದರಿಂದ ಹುಲಿಯನ್ನು ರಕ್ಷಿಸುವುದು ಎಂದರೆ ಕಾಡು, ಜಲಮೂಲಗಳು, ಜೀವವೈವಿಧ್ಯ ಮತ್ತು ಪರಿಸರವನ್ನು ಸಂರಕ್ಷಿಸುವುದಾಗಿದೆ.

ಹುಲಿ ಸಂರಕ್ಷಣೆ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಅರಣ್ಯ ಸಂರಕ್ಷಣೆ, ಅಕ್ರಮ ಬೇಟೆ ತಡೆ, ಪರಿಸರ ಜಾಗೃತಿ ಮತ್ತು ವನ್ಯಜೀವಿಗಳ ಬಗ್ಗೆ ಗೌರವದ ಮನೋಭಾವ ಬೆಳೆಸುವ ಮೂಲಕ ನಾವು ಈ ಅಮೂಲ್ಯ ಜೀವಿಯನ್ನು ಮುಂದಿನ ಪೀಳಿಗೆಗೂ ಉಳಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande