ಇರಾನ್–ಒಮಾನ್ ಮಾತುಕತೆಗೆ ವೇಗ; ಅಮೆರಿಕ ದಾಳಿ ಸ್ಥಗಿತ, ಹೂತಿ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿಕೆ
ಟೆಹ್ರಾನ್/ವಾಷಿಂಗ್ಟನ್/ಕೀವ್, ಜುಲೈ 26(ಹಿ.ಸ.): ಆ್ಯಂಕರ್:ಇರಾನ್ ಮತ್ತು ಅಮೆರಿಕ ನಡುವಿನ ಹಲವು ತಿಂಗಳ ಉದ್ವಿಗ್ನತೆಯ ನಡುವೆ ಪರಿಸ್ಥಿತಿ ತಣ್ಣಗಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಹೋರ್ಮುಜ್ ಜಲಸಂಧಿ ಹಾಗೂ ಸಮುದ್ರ ಮಾರ್ಗಗಳ ಸುರಕ್ಷತೆ ಕುರಿತಂತೆ ಇರಾನ್ ಮತ್ತು ಒಮಾನ್ ನಡುವೆ ನಡೆದ ರಾಜತಾಂತ
सांकेतिक।


ಟೆಹ್ರಾನ್/ವಾಷಿಂಗ್ಟನ್/ಕೀವ್, ಜುಲೈ 26(ಹಿ.ಸ.):

ಆ್ಯಂಕರ್:ಇರಾನ್ ಮತ್ತು ಅಮೆರಿಕ ನಡುವಿನ ಹಲವು ತಿಂಗಳ ಉದ್ವಿಗ್ನತೆಯ ನಡುವೆ ಪರಿಸ್ಥಿತಿ ತಣ್ಣಗಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಹೋರ್ಮುಜ್ ಜಲಸಂಧಿ ಹಾಗೂ ಸಮುದ್ರ ಮಾರ್ಗಗಳ ಸುರಕ್ಷತೆ ಕುರಿತಂತೆ ಇರಾನ್ ಮತ್ತು ಒಮಾನ್ ನಡುವೆ ನಡೆದ ರಾಜತಾಂತ್ರಿಕ ಮಾತುಕತೆಯಲ್ಲಿ ಮಹತ್ವದ ಪ್ರಗತಿ ಸಾಧನೆಯಾಗಿದ್ದು, ಅಂತಿಮ ಒಪ್ಪಂದದತ್ತ ಎರಡೂ ರಾಷ್ಟ್ರಗಳು ಹೆಜ್ಜೆ ಇಟ್ಟಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ಒಮಾನ್‌ನ ಹಿರಿಯ ಅಧಿಕಾರಿಗಳು ತೆಹ್ರಾನ್‌ಗೆ ಭೇಟಿ ನೀಡಿ ಇರಾನ್ ಅಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಹೋರ್ಮುಜ್ ಜಲಸಂಧಿ ಮತ್ತು ಸುತ್ತಮುತ್ತಲಿನ ಸಮುದ್ರ ಪ್ರದೇಶಗಳನ್ನು ಪುನಃ ಮುಕ್ತಗೊಳಿಸುವ ಕುರಿತು ಚರ್ಚೆ ನಡೆದಿದ್ದು, ಮಾತುಕತೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಂತಿಮ ಒಪ್ಪಂದಕ್ಕೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಹೇಳಲಾಗಿದೆ.

ಈ ರಾಜತಾಂತ್ರಿಕ ಬೆಳವಣಿಗೆಗಳ ನಡುವೆ ಅಮೆರಿಕ ತನ್ನ ವೈಮಾನಿಕ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸತತ 13 ರಾತ್ರಿ ಇರಾನ್ ಗುರಿಯಾಗಿಸಿ ದಾಳಿ ನಡೆಸಿದ್ದ ಅಮೆರಿಕ ಸೇನೆ, 14ನೇ ರಾತ್ರಿ ಯಾವುದೇ ದಾಳಿ ನಡೆಸಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ವೈಟ್ ಹೌಸ್ ಅಥವಾ ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಂ) ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಒಮಾನ್–ಇರಾನ್ ಮಾತುಕತೆಯ ಮೇಲೆ ಅಮೆರಿಕ ನಿಕಟವಾಗಿ ಗಮನ ಹರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಇರಾನ್ ಮತ್ತು ಅಮೆರಿಕ ಎರಡೂ ರಾಷ್ಟ್ರಗಳು ಕದನ ವಿರಾಮದ ಸಾಧ್ಯತೆಗಳ ಬಗ್ಗೆ ಮಧ್ಯಸ್ಥ ರಾಷ್ಟ್ರಗಳ ಮೂಲಕ ಪರೋಕ್ಷ ಮಾತುಕತೆ ನಡೆಸುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣದ ವಿಷಯದಲ್ಲಿ ಎರಡೂ ರಾಷ್ಟ್ರಗಳು ತಮ್ಮ ನಿಲುವುಗಳನ್ನು ಬದಲಾಯಿಸಲು ಸಿದ್ಧವಾಗಿಲ್ಲ. ಇರಾನ್ ವಾಣಿಜ್ಯ ಹಡಗುಗಳಿಂದ ಸುಂಕ ವಸೂಲಿಗೆ ಮುಂದಾಗಿರುವುದಕ್ಕೆ ಅಮೆರಿಕ ತನ್ನ ನೌಕಾಪಡೆಯ ಮೂಲಕ ಇರಾನಿನ ಬಂದರುಗಳ ಮೇಲೆ ನಿರ್ಬಂಧ ಮುಂದುವರಿಸಿದೆ.

ಇನ್ನೊಂದೆಡೆ, ಕ್ಯಾಸ್ಪಿಯನ್ ಸಮುದ್ರದಲ್ಲಿ ಇರಾನ್‌ಗೆ ಸಂಬಂಧಿಸಿದ ಹಡಗಿನ ಮೇಲೆ ನಡೆದ ದಾಳಿಯಿಂದ ಉಕ್ರೇನ್ ವಿರುದ್ಧ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ದಾಳಿಯಲ್ಲಿ ಒಬ್ಬ ನಾವಿಕ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್‌ನ ಹಿರಿಯ ರಾಜತಾಂತ್ರಿಕರನ್ನು ಇರಾನ್ ವಿದೇಶಾಂಗ ಸಚಿವಾಲಯಕ್ಕೆ ಕರೆಸಿ ತೀವ್ರ ಪ್ರತಿಭಟನೆ ದಾಖಲಿಸಿದೆ. ವಿಶ್ವಸಂಸ್ಥೆಯ ಘೋಷಣಾಪತ್ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಇರಾನ್, ಈ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದೆ.

ಅಮೆರಿಕದ ಸೆಂಟ್‌ಕಾಂ ಕೂಡ ಇರಾನ್ ಮೇಲಿನ ಸಮುದ್ರ ನಿರ್ಬಂಧ ಮುಂದುವರಿದಿರುವುದಾಗಿ ತಿಳಿಸಿದೆ. ಅರಬ್ಬೀ ಸಮುದ್ರದಲ್ಲಿ ಕೋಮೊರೊಸ್ ಧ್ವಜದಡಿ ಸಂಚರಿಸುತ್ತಿದ್ದ ಟ್ಯಾಂಕರ್ ಹಾಗೂ ಒಮಾನ್ ಕೊಲ್ಲಿಯಲ್ಲಿ ಮೊಜಾಂಬಿಕ್ ಧ್ವಜದಡಿ ಸಾಗುತ್ತಿದ್ದ ಮತ್ತೊಂದು ಟ್ಯಾಂಕರ್ ಅನ್ನು ತಡೆದು ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದೆ. ಈ ಹಡಗುಗಳು ಇರಾನ್‌ಗೆ ತೆರಳುತ್ತಿದ್ದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಸೆಂಟ್‌ಕಾಂ ಸ್ಪಷ್ಟಪಡಿಸಿದೆ.

ಉಕ್ರೇನ್ ತನ್ನ ದಾಳಿಗಳು ರಷ್ಯಾದ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದವು ಎಂದು ಸಮರ್ಥಿಸಿಕೊಂಡಿದೆ. ಆ ಹಡಗುಗಳ ಮೂಲಕ ಇರಾನ್‌ಗೆ ಮಿಲಿಟರಿ ಸಾಮಗ್ರಿಗಳು ಸಾಗಿಸಲಾಗುತ್ತಿತ್ತು ಎಂದು ಉಕ್ರೇನ್ ಆರೋಪಿಸಿದೆ. ಅಲ್ಲದೆ, ರಷ್ಯಾ ಉಪಗ್ರಹಗಳ ಮೂಲಕ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮಾಹಿತಿಯನ್ನು ಇರಾನ್‌ಗೆ ರವಾನಿಸುತ್ತಿದೆ ಎಂಬ ಸಾಕ್ಷ್ಯಗಳನ್ನು ಶೀಘ್ರದಲ್ಲೇ ಅಮೆರಿಕಕ್ಕೆ ಸಲ್ಲಿಸಲಾಗುವುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಇದರ ಮಧ್ಯೆ, ಯೆಮನ್‌ನ ಹೂತಿ ಬಂಡುಕೋರರು ತಮ್ಮ ದಾಳಿಯ ತೀವ್ರತೆಯನ್ನು ಮುಂದುವರಿಸಿದ್ದಾರೆ. ಸೌದಿ ನೇತೃತ್ವದ ಮೈತ್ರಿಕೂಟ ಹೋದೈದಾ ಬಂದರು ಮತ್ತು ಕಮರಾನ್ ದ್ವೀಪದ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಜಿಜಾನ್ ಮತ್ತು ಯಾನ್‌ಬು ಪ್ರದೇಶಗಳಲ್ಲಿರುವ ಸೌದಿ ಅರಾಂಕೊ ತೈಲ ಸೌಲಭ್ಯಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಹೂತಿ ಸಂಘಟನೆ ಹೇಳಿಕೊಂಡಿದೆ.

ಈ ಎಲ್ಲಾ ಬೆಳವಣಿಗೆಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇನ್ನೂ ಸಂಪೂರ್ಣವಾಗಿ ಕಡಿಮೆಯಾಗದಿದ್ದರೂ, ಇರಾನ್–ಒಮಾನ್ ಮಾತುಕತೆ ಮುಂದಿನ ದಿನಗಳಲ್ಲಿ ಶಾಂತಿ ಸ್ಥಾಪನೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ವಲಯಗಳು ಅಭಿಪ್ರಾಯಪಟ್ಟಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande