
ಬೆಂಗಳೂರು, 25 ಜುಲೈ (ಹಿ.ಸ.):
ಆ್ಯಂಕರ್:ಮೈಸೂರಿನ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಶೀಘ್ರ ದರ್ಶನದ ಹೆಸರಿನಲ್ಲಿ ₹2,000 ಶುಲ್ಕ ಪಡೆದು, 20 ನಿಮಿಷದಲ್ಲಿ ದರ್ಶನ ಕಲ್ಪಿಸುವುದಾಗಿ ಹೇಳಿ ನಂತರ ವಿಐಪಿಗಳ ಆಗಮನದ ನೆಪದಲ್ಲಿ ಭಕ್ತರನ್ನು 4ರಿಂದ 5 ಗಂಟೆಗಳ ಕಾಲ ಸಾಲಿನಲ್ಲಿ ಕಾಯಿಸುವುದು ಖಂಡನೀಯ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ವಯೋವೃದ್ಧರು, ಮಹಿಳೆಯರು ಹಾಗೂ ಪುಟ್ಟ ಮಕ್ಕಳೊಂದಿಗೆ ಬಂದ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಉಸ್ತುವಾರಿ ಸಚಿವ ಡಾ. ಯತೀಂದ್ರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ, ಭಕ್ತರಿಂದ ಹಣ ವಸೂಲಿ ಮಾಡುವಷ್ಟು ಆಸಕ್ತಿ, ಅವರಿಗೆ ಗೌರವಯುತ ಮತ್ತು ಸಮಯೋಚಿತ ದರ್ಶನ ವ್ಯವಸ್ಥೆ ಕಲ್ಪಿಸುವಲ್ಲಿ ಏಕೆ ಕಾಣಿಸುತ್ತಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.
ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಅವರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಪಾರದರ್ಶಕ ಹಾಗೂ ಸುಸೂತ್ರ ದರ್ಶನ ವ್ಯವಸ್ಥೆ ಕಲ್ಪಿಸಬೇಕು. ವಿಐಪಿ ಸಂಸ್ಕೃತಿಯ ಹೆಸರಿನಲ್ಲಿ ಸಾಮಾನ್ಯ ಭಕ್ತರನ್ನು ಗಂಟೆಗಟ್ಟಲೆ ಕಾಯಿಸುವ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.