

ಬಳ್ಳಾರಿ, 25 ಜುಲೈ (ಹಿ.ಸ.):
ಆ್ಯಂಕರ್ : ಕರ್ನಾಟಕ ಅರಣ್ಯ ಇಲಾಖೆಯ ಬಳ್ಳಾರಿ ವಿಭಾಗದ ವತಿಯಿಂದ ಅಳಿವಿನಂಚಿನಲ್ಲಿರುವ ಅಪರೂಪದ ಹಕ್ಕಿಯಾದ ಎರಬೂತ ಸಂರಕ್ಷಣೆ, ಅದರ ಎದುರಿನ ಸವಾಲುಗಳು ಮತ್ತು ದೀರ್ಘಕಾಲೀನ ರಕ್ಷಣಾ ಕಾರ್ಯತಂತ್ರಗಳ ಕುರಿತು ಜುಲೈ 27 ರಂದು ಕಮಲಾಪುರದ ದರೋಜಿ ಕರಡಿ ಧಾಮ ಪ್ರಕೃತಿ ನಿರೂಪಣಾ ಕೇಂದ್ರದಲ್ಲಿ ಪ್ರಾದೇಶಿಕ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಈ ವಿಶೇಷ ಕಾರ್ಯಾಗಾರದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್ ಅವರು ಭಾಗವಹಿಸಲಿದ್ದಾರೆ.
ಅಲ್ಲದೆ, ಭಾರತೀಯ ವನ್ಯಜೀವಿ ಸಂಸ್ಥೆ (ಹಾಗೂ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಸ್ಥೆಗಳ ಪ್ರಸಿದ್ಧ ವಿಜ್ಞಾನಿಗಳು ಮತ್ತು ಸಂರಕ್ಷಣಾ ಜೀವಶಾಸ್ತ್ರಜ್ಞರು ಆಗಮಿಸಿ ಕ್ಷೇತ್ರ ಮಟ್ಟದ ತಮ್ಮ ಅನುಭವ ಹಾಗೂ ವೈಜ್ಞಾನಿಕ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಕಾರ್ಯಾಗಾರದ ಪ್ರಮುಖ ಉದ್ದೇಶಗಳು:
ಎರಬೂತ ತಳಿಯ ಪ್ರಸ್ತುತ ಸ್ಥಿತಿಗತಿ ಮತ್ತು ಸಂರಕ್ಷಣಾ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು. ತೀವ್ರ ಅಳಿವಿನಂಚಿನಲ್ಲಿರುವ ಈ ಪಕ್ಷಿ ಪ್ರಭೇದ ಎದುರಿಸುತ್ತಿರುವ ಬೆದರಿಕೆಗಳು ಹಾಗೂ ಸಂರಕ್ಷಣೆಗೆ ಇರುವ ಅವಕಾಶಗಳನ್ನು ಗುರುತಿಸುವುದು. ವಿವಿಧ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಿ, ಆವಾಸಸ್ಥಾನಗಳ ಪುನಶ್ಚೇತನಕ್ಕೆ ಪ್ರಾದೇಶಿಕ ಹಂತದಲ್ಲಿ ಸೂಕ್ತ ಕಾರ್ಯತಂತ್ರ ರೂಪಿಸುವುದು.
12 ಜಿಲ್ಲೆಗಳ ಅಧಿಕಾರಿಗಳ ಭಾಗವಹಿಸುವಿಕೆ:
ಉತ್ತರ ಕರ್ನಾಟಕ ಭಾಗದ (ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಪ್ರದೇಶಗಳ) 12 ಜಿಲ್ಲೆಗಳ ಅರಣ್ಯಾಧಿಕಾರಿಗಳು ಮತ್ತು ಜಿಲ್ಲಾ ಆಡಳಿತ ವ್ಯವಸ್ಥೆ ಈ ಕಾರ್ಯಾಗಾರದಲ್ಲಿ ಕೈಜೋಡಿಸಲಿದೆ.
ಭಾಗವಹಿಸುವ ಜಿಲ್ಲೆಗಳು: ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಮತ್ತು ವಿಜಯಪುರ.
ಇದರೊಂದಿಗೆ ಪೊಲೀಸ್ ಮಹಾನಿರೀಕ್ಷಕರು, ಬಳ್ಳಾರಿ ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಗಳು, 12 ಜಿಲ್ಲೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಆಯ್ದ ವಲಯ ಅರಣ್ಯಾಧಿಕಾರಿಗಳು ಹಾಗೂ ಉಪ ವಲಯ ಅರಣ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ್ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್