

ಬಳ್ಳಾರಿ, 25 ಜುಲೈ (ಹಿ.ಸ.):
ಆ್ಯಂಕರ್ : ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಬಳ್ಳಾರಿ ತಾಲೂಕಿನ ಹಲಕುಂದಿ, ಮಿಂಚೇರಿ ಹಾಗೂ ಸಂಜಿರಾಯನಕೋಟೆ ಗ್ರಾಮಗಳ ಕೃಷಿ ಜಮೀನುಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಭೇಟಿ ನೀಡಿ, ಬೆಳೆಗಳ ಪರಿಸ್ಥಿತಿಯನ್ನು ವೀಕ್ಷಿಸಿದ್ದಾರೆ.
ಜಮೀನಿನಲ್ಲಿ ಬಿತ್ತನೆಯಾಗಿರುವ ತೊಗರಿ, ಹತ್ತಿ, ಸಜ್ಜೆ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಕುಂದಿ, ಮಿಂಚೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ 25 ದಿನಗಳಿಂದ ಹನಿಯೂ ಮಳೆಯಾಗಿಲ್ಲ. ಶೇ.80 ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿರುವ ತೊಗರಿ, ಸೂರ್ಯಕಾಂತಿ ಹಾಗೂ ಹತ್ತಿ ಬೆಳೆಗಳು ತೇವಾಂಶ ಅಭಾವದಿಂದ ಬಳಲುತ್ತಿವೆ. ಶೇ.100 ರಷ್ಟು ಬೆಳೆಯಬೇಕಿದ್ದ ಜಾಗದಲ್ಲಿ ಕೇವಲ ಶೇ.30 ರಷ್ಟು ಮಾತ್ರ ಬೆಳೆದಿದೆ ಎಂದು ತಿಳಿಸಿದರು.
ಎಲ್ ನಿನೋ ಪರಿಣಾಮದಿಂದ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿಗೂ ಹೆಚ್ಚು ನೀರಿತ್ತು. ಆದರೆ ಪ್ರಸ್ತುತ ಕೇವಲ 28 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಕಾಲುವೆಗೆ ನೀರು ಬಿಡುಗಡೆಯಾಗದ ಕಾರಣ ಸಿರುಗುಪ್ಪ, ಕಂಪ್ಲಿ ಮತ್ತು ಬಳ್ಳಾರಿ ಭಾಗದಲ್ಲಿ ಭತ್ತದ ಬಿತ್ತನೆ ಸಾಧ್ಯವಾಗಿಲ್ಲ. ಹೀಗಾಗಿ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು ಹಾಗೂ ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳ ಆದೇಶದಂತೆ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಕ್ಷೇತ್ರ ಭೇಟಿ ಪರಿಶೀಲನೆ ನಡೆಸುತ್ತಿದ್ದು, ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ಕೇಂದ್ರದ ಡ್ರಾಟ್ ಮಾನಿಟರಿಂಗ್ ಸೆಲ್ ಮೂಲಕ ಹವಾಮಾನ ದತ್ತಾಂಶ ಹಾಗೂ ಒಣ ಹವೆ ಆಧಾರದ ಮೇಲೆ ಡ್ರಾಟ್ ಟ್ರಿಗರ್ ನಿಯಮಾವಳಿಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಸ್ಪಾಂಜ್ ಐರನ್ ಕಾರ್ಖಾನೆ ಧೂಳಿನಿಂದ ಬೆಳೆ ನಷ್ಟ ಮತ್ತು ಸಾರ್ವಜನಿಕರ ಉಸಿರಾಟದ ತೊಂದರೆ ಕುರಿತು ಸ್ಪಂದಿಸಿದ ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅವರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತನಿಖಾ ವರದಿ ಬಂದ ತಕ್ಷಣ ಕಾನೂನು ಹಾಗೂ ನ್ಯಾಯಾಲಯದ ವ್ಯಾಪ್ತಿಯಲ್ಲಿ ರೈತರ ಹಿತರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್, ಉಪ ನಿರ್ದೇಶಕ ಎಸ್.ಎನ್.ಮಂಜುನಾಥ್, ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ, ತಹಶೀಲ್ದಾರರಾದ ಟಿ.ರೇಖಾ ಸೇರಿದಂತೆ ರೈತರು ಹಾಗೂ ಇತರರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್