


ಕೊಪ್ಪಳ, 25 ಜುಲೈ (ಹಿ.ಸ.):
ಆ್ಯಂಕರ್ :ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ‘ಕುಸುಮ್-ಬಿ’ ಯೋಜನೆಯಡಿ ರೈತರು ಸೋಲಾರ್ ವಿದ್ಯುತ್ ಪಂಪ್ಸೆಟ್ಗಳನ್ನು ಅಳವಡಿಸಿಕೊಳ್ಳಲು ಸಹ ಮುಂದಾಗಬೇಕೆಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ನೆಲೋಗಿಪುರ (ಭೈರಾಪುರ) ಗ್ರಾಮದಲ್ಲಿ ರೂ. 27.46 ಕೋಟಿ ಅಂದಾಜು ವೆಚ್ಚದಲ್ಲಿ ನೂತನ 2*20ಎಂವಿಎ, 110/11ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಹಾಗೂ ಮುಂಡರಗಿ-ಬೆಟಗೇರಿ ಎಸ್ಸಿ ಲೈನ್ನಿಂದ ನೆಲೋಗಿಪುರ ಉಪಕೇಂದ್ರಕ್ಕೆ 6 ಕಿ.ಮೀ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರೈತರು ಸೌರಶಕ್ತಿ ಯೋಜನೆಗಳ ಬಗ್ಗೆಯೂ ಗಮನ ಹರಿಸಬೇಕು. ಕುಸುಮ್-ಬಿ ಯೋಜನೆಯಡಿ ರೈತರಿಗೆ 90% ಸಹಾಯಧನ ಸಿಗುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಹೊಲಗಳ ಬೋರ್ವೇಲಗಳಿಗೆ ಸೋಲಾರ್ ಪಂಪ್ಸೆಟ್ಗಳನ್ನು ಅಳವಡಿಸಿಕೊಂಡು ಹಗಲು ವೇಳೆಯಲ್ಲೇ ಕೃಷಿಗೆ ನೀರುಣಿಸಬಹುದು ಎಂದರು.
ರೈತರು ಆರ್ಥಿಕವಾಗಿ ಸಬಲರಾಗಲು ಮತ್ತು ಕೃಷಿ ಚಟುವಟಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ. ಈ ಭಾಗದಲ್ಲಿ ನೀರಾವರಿ ಯೋಜನೆಗಳಿಲ್ಲದೆ ರೈತರು ಸಂಪೂರ್ಣವಾಗಿ ಬೋರ್ವೆಲ್ಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಅವರಿಗೆ ಸೂಕ್ತ ಟ್ರಾನ್ಸ್ಫಾರ್ಮರ್ ಹಾಗೂ ವಿದ್ಯುತ್ ಮಾರ್ಗಗಳ ಅಗತ್ಯವಿದೆ. 2013 ರ ಅವಧಿಯಲ್ಲಿ ಕೊಪ್ಪಳ ತಾಲೂಕಿನಲ್ಲಿ ತಾಲೂಕುವಾರು 7 ನೂತನ ಉಪಕೇಂದ್ರಗಳನ್ನು ಮಂಜೂರು ಮಾಡಿಸಲಾಗಿತ್ತು.
ಜಾಗದ ಅಭಾವದ ನಡುವೆಯೂ, ನೆಲೋಗಿಪುರ ಗ್ರಾಮದಲ್ಲಿ ಸರ್ಕಾರಿ ಜಾಗ ಗುರುತಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನೂತನ ಉಪಕೇಂದ್ರ ಸ್ಥಾಪನೆಯಿಂದ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮತ್ತು ಸಾರ್ವಜನಿಕರಿಗೆ ಕಡಿಮೆ ವೋಲ್ಟೇಜ್ ಹಾಗೂ ವಿದ್ಯುತ್ ಏರಿಳಿತದ ಸಮಸ್ಯೆ ಬಗೆಹರಿಯಲಿದೆ. ಉಪಕೇಂದ್ರದಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಸಮರ್ಪಕ ವೋಲ್ಟೇಜ್ ದೊರೆಯಲಿದೆ.
ರಸ್ತೆ ಅಭಿವೃದ್ಧಿ: ಕೆಸಿಡಬ್ಲ್ಯೂಡಿ ಯೋಜನೆಯಡಿ 230 ಕೋಟಿ ರೂ. ವೆಚ್ಚದಲ್ಲಿ ಗಿಣಿಗೇರಿಯಿಂದ ಮುಂಡರಗಿವರೆಗಿನ ರಸ್ತೆ ಸುಧಾರಣೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭಾರತಮಾಲಾ-2 ಯೋಜನೆಯಡಿ ಪುಣೆ-ಬೆಂಗಳೂರು ಎಕ್ಸ್ಪ್ರೆಸ್ವೇ ಈ ಭಾಗದಲ್ಲಿ ಹಾದುಹೋಗಲಿದ್ದು, ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ನೆಲೋಗಿಪುರ ಹಳ್ಳದ ಸೇತುವೆ ನಿರ್ಮಾಣ ಸೇರಿದಂತೆ ಈ ಭಾಗದ ಮೂಲಸೌಕರ್ಯಗಳ ಕೊರತೆಯನ್ನು ಶಾಸಕರೊಂದಿಗೆ ಚರ್ಚಿಸಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಸಂಸದರು ಭರವಸೆ ನೀಡಿದರು.
ಮಾಜಿ ಸಂಸದ ಕರಡಿ ಸಂಗಣ್ಣ ಅವರ ಮಾತನಾಡಿ, ಇಂದಿನ ದಿನವನ್ನು ರೈತರ ಸಂಭ್ರಮದ ದಿನವೆಂದು ಕರೆಯಬಹುದು. ನಮ್ಮ ದೇಶದಲ್ಲಿ ಶೇ. 70ರಷ್ಟು ಜನರು ಭೂಮಿ ತಾಯಿಯನ್ನೇ ನಂಬಿ ಬದುಕುತ್ತಿದ್ದಾರೆ. ಈ ಭಾಗದಲ್ಲಿ ವಿದ್ಯುತ್ ಅಭಾವ, ಲೋ ವೋಲ್ಟೇಜ್ ಹಾಗೂ ವಿದ್ಯುತ್ ವ್ಯತ್ಯಯದಿಂದಾಗಿ ರೈತರ ಐಪಿ ಸೆಟ್ ಪಂಪ್ಗಳು ಸುಟ್ಟುಹೋಗಿ, ಮರು ಜೋಡಣೆಗಾಗಿ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದರು. ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರ ತಾಲೂಕಿನಲ್ಲಿ ಭವಿಷ್ಯದ ಪರಿಕಲ್ಪನೆಯೊಂದಿಗೆ ಆರು ವಿದ್ಯುತ್ ಉಪಕೇಂದ್ರಗಳನ್ನು ತಂದಿದ್ದಾರೆ. ಆ ಮೂಲಕ ರೈತರ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡುವ ಕೆಲಸ ಮಾಡಿದ್ದಾರೆ ಎಂದರು.
ರೈತರು ಸೋಲಾರ್ ವಿದ್ಯುತ್ ಪಂಪ್ಸೆಟ್ಗಳನ್ನು ಅಳವಡಿಸಿಕೊಂಡಲ್ಲಿ ರೈತರಿಗೆ ಸ್ವಂತ ಆಸ್ತಿಯಾಗುವುದಲ್ಲದೆ, ವೆಚ್ಚವೂ ಕಡಿಮೆಯಾಗಿ ಆರ್ಥಿಕ ಉಳಿತಾಯವಾಗುತ್ತದೆ. ಕ್ಷೇತ್ರದಲ್ಲಿ ವಿವಿಧ ನೀರಾವರಿ ಯೋಜನೆಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈ ಎಲ್ಲಾ ಯೋಜನೆಗಳಿಂದ ತಾಲೂಕಿನ ಸರಿಸುಮಾರು 1 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ರೈತರು ನೀರನ್ನು ಪೋಲು ಮಾಡದೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು, ಹನಿ ನೀರಾವರಿ (ಡ್ರಿಪ್) ಹಾಗೂ ತುಂತುರು ನೀರಾವರಿ (ಸ್ಪಿಂಕ್ಲರ್) ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವುದರ ಜೊತೆಗೆ ಉತ್ತಮ ಆದಾಯ ಗಳಿಸಲು ಸಾಧ್ಯ ಎಂದು ತಿಳಿಸಿದರು.
ಕೆಪಿಟಿಸಿಎಲ್ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ರಾಘವೇಂದ್ರ ಪ್ರಸಾದಬಾಬು ಅವರು ಮಾತನಾಡಿ, ಈ ಮೊದಲು ನೆಲೋಗಿಪುರ, ಭೈರಾಪುರ, ಅಳವಂಡಿ, ಹಲವಾಗಲಿ, ಬೆಳಗಟ್ಟಿ, ಕವಲೂರು, ಮರ್ನಾಳ, ಬೋಚನಳ್ಳಿ, ಹನಕುಂಟಿ, ತಿಗರಿ ಹಾಗೂ ಸುತ್ತಮುತ್ತಲಿನ ಇನ್ನಿತರೇ ಪ್ರದೇಶಗಳಿಗೆ 33/11 ಕೆ.ವಿ. ಅಳವಂಡಿ ಮತ್ತು 110/33/11 ಕೆ.ವಿ ಬೆಟಗೇರಾ ವಿದ್ಯುತ್ ಉಪ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಈ ಭಾಗದಲ್ಲಿ ರೈತರು, ಕೃಷಿಕರು ತಮ್ಮ ಕೃಷಿ ಚಟುವಟಿಕೆಗಳ ಸಲುವಾಗಿ ಪಂಪಸೆಟ್ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಇದರಿಂದಾಗಿ ವಿದ್ಯುತ್ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುತ್ತದೆ.
ಎಲ್ಲ ಗ್ರಾಮಗಳ ವಿದ್ಯುತ್ ಗ್ರಾಹಕರುಗಳಿಗೆ ನಿರಂತರ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಈ ವಿದ್ಯುತ್ ಉಪ ಕೇಂದ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದರಿಂದ ಗ್ರಾಹಕರುಗಳಿಗೆ ಹಾಗೂ ಕೃಷಿ ಜಮೀನಿನ ಪಂಪ್ ಸೆಟ್ಗಳಿಗೆ ಕಡಿಮೆ ವೋಲ್ವೇಜ್ ತೊಂದರೆಯಿಲ್ಲದ, ಅಡಚಣೆ ರಹಿತ ಉತ್ತಮ ಗುಣಮಟ್ಟದ ವಿದ್ಯುತ್ನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯುತ್ ಗ್ರಾಹಕರುಗಳಿಗೆ ಉತ್ತಮಗುಣ ಮಟ್ಟದ ಹಾಗೂ ನಿರಂತರ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಮತ್ತು ಈ ಭಾಗದ ವಿದ್ಯುತ್ ಜಾಲವನ್ನು ಉತ್ತಮಗೊಳಿಸುವ ಸಲುವಾಗಿ 110 ಕೆ.ವಿ. ಭಾಗ್ಯನಗರ, 110 ಕೆ.ವಿ. ಗೊಂಡಬಾಳ, 110 ಕೆ.ವಿ. ಕಲ್ತಾವರೆಗೇರಾ, 110 ಕೆ.ವಿ. ಬಂಡಿಹರ್ಲಾಪುರ, 110 ಕೆ.ವಿ. ಚಿಕ್ಕಬಗನಾಳ ಮತ್ತು 110 ಕೆ.ವಿ. ಚಿಕ್ಕಕಾಸನಕಂಡಿ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಮತ್ತು ಈ ಯೋಜನೆಗಳ ಪ್ರಸ್ತಾವನೆಗಳಿಗೆ ನಿಗಮದ ತಾಂತ್ರಿಕ ಸಮನ್ವಯ ಸಮಿತಿ ಸಭೆಯ ಅನುಮೋದನೆಯನ್ನು ಪಡೆಯಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಕೊಪ್ಪಳ ಜೆಸ್ಕಾಂ ಅಧೀಕ್ಷಕ ಅಭಿಯಂತರರಾದ ಮೋಟ್ಲಾ ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಯು.ವೀರೇಶ ಹಾಗೂ ಎಲ್.ಅರುಣ, ಮಾಜಿ ಜಿ.ಪಂ ಅಧ್ಯಕ್ಷರಾದ ಎಸ್.ಬಿ ನಾಗರಳ್ಳಿ, ಕೆ.ಎಂ.ಎಫ್ ನಿರ್ದೇಶಕರಾದ ಕೃಷ್ಣ ರೆಡ್ಡಿ, ಜಿ.ಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಗೇರಿ ಮುಖಂಡರಾದ ಸುರೇಶ ರೆಡ್ಡಿ, ಕಾಟನ್ ಪಾಶಾ, ಯಂಕನಗೌಡ್ರ ಹಿರೇಗೌಡ್ರ, ಭರಮಪ್ಪ ಹಟ್ಟಿ, ಶಾಹೀದ್, ಅನ್ವರ ಅಳವಂಡಿ, ಗುರುಬಸವರಾಜ್ ಹಳ್ಳಿಕೇರಿ, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಸಿಂಟ್ರ, ಶಿವಕುಮಾರ್ ಶೆಟ್ಟರ್, ಹನಮೇಶ್ ಹೊಸಳ್ಳಿ, ಆನಂದ ಕಿನ್ನಾಳ ಸೇರಿದಂತೆ ಹಲವು ಗಣ್ಯರು, ಮುಖಂಡರು, ಇತರೆ ಜನಪ್ರತಿನಿಧಿಗಳು, ಜೆಸ್ಕಾ ಮತ್ತು ಕೆಪಿಟಿಸಿಎಲ್.ನ ಎಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಅಧಿಕಾರಿಗಳು, ಸಿಬ್ಬಂದಿ, ರೈತರು, ನಿಲೋಗುಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್