
ಬಾಗಲಕೋಟೆ, 25 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೂಲಕ ಹರಿಯುವ ಘಟಪ್ರಭಾ ನದಿಯ ನೀರಿನ ಹರಿವು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಬೆಳಗಾವಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಇದೀಗ ಗಣನೀಯವಾಗಿ ಕುಸಿದಿದ್ದು, ನದಿ ತೀರದ ಜನರು ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ.
ಶನಿವಾರ ಬೆಳಿಗ್ಗೆಯ ವೇಳೆಗೆ ಘಟಪ್ರಭಾ ನದಿಗೆ ಕೇವಲ 3,780 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಶುಕ್ರವಾರ ಇದೇ ವೇಳೆಗೆ ದಾಖಲಾಗಿದ್ದ 7,330 ಕ್ಯುಸೆಕ್ ನೀರಿನ ಹರಿವಿನೊಂದಿಗೆ ಹೋಲಿಸಿದರೆ ಕೇವಲ ಒಂದು ದಿನದ ಅಂತರದಲ್ಲೇ ಸುಮಾರು 3,550 ಕ್ಯುಸೆಕ್ ನೀರಿನ ಇಳಿಕೆ ಕಂಡುಬಂದಿದೆ. ಇದು ನದಿಯ ಹರಿವಿನಲ್ಲಿ ಉಂಟಾಗಿರುವ ತೀವ್ರ ಕುಸಿತವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಮೇಲ್ಭಾಗದ ಬೆಳಗಾವಿ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನದಿಗೆ ಸೇರುವ ನೀರಿನ ಪ್ರಮಾಣವೂ ತಗ್ಗಿದೆ. ಹೀಗಾಗಿ ಘಟಪ್ರಭಾ ನದಿಯ ಹರಿವು ನಿಧಾನವಾಗಿ ಇಳಿಮುಖವಾಗುತ್ತಿದೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.
ನೀರಿನ ಹರಿವು ಇದೇ ರೀತಿ ಕುಸಿಯುತ್ತಿದ್ದರೆ ಕೃಷಿ ಚಟುವಟಿಕೆಗಳಿಗೆ, ನದಿ ಆಧಾರಿತ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ನೀರಾವರಿ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಮೇಲ್ಭಾಗದಲ್ಲಿ ಉತ್ತಮ ಮಳೆಯಾದರೆ ನದಿಯ ಹರಿವು ಮತ್ತೆ ಹೆಚ್ಚಾಗುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande