ಮುಳವಾಡ ಕೈಗಾರಿಕಾ ಪ್ರದೇಶ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ. ಆನಂದ ಕೆ.
ವಿಜಯಪುರ, 25 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಹೊರವಲಯದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ.) ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಭೇಟಿ ನೀಡಿ, ಕೈಗಾ
ಡಿ. ಸಿ


ವಿಜಯಪುರ, 25 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಹೊರವಲಯದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ.) ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಭೇಟಿ ನೀಡಿ, ಕೈಗಾರಿಕಾ ಪ್ರದೇಶದಲ್ಲಿನ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಪರಿಶೀಲನೆ ನಡೆಸಿದರು.

ಭೇಟಿಯ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶದ ಹಂತ–1, ಹಂತ–2 ಹಾಗೂ ಹಂತ–3ರಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾದ ಕೈಗಾರಿಕಾ ನಿವೇಶನಗಳು, ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ, ಬೀದಿ ದೀಪಗಳು, ಹಸಿರು ಪ್ರದೇಶ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆದಿರುವ ಮೆ. ರಿಲಾಯನ್ಸ್ ಕನ್ಸೂಮರ್ ಪ್ರೋಡಕ್ಟ್ಸ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆಗೆ ಮೀಸಲಾದ ಸ್ಥಳವನ್ನು ಪರಿಶೀಲಿಸಿದರು.

ಸುಮಾರು ₹1,622 ಕೋಟಿ ಯೋಜನಾ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಪ್ಯಾಕೇಜ್ಡ್ ಕಾರ್ಬೋನೇಟೆಡ್ ಸಾಫ್ಟ್ ಡ್ರಿಂಕ್ಸ್ ಹಾಗೂ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಉತ್ಪಾದನಾ ಘಟಕ ನಿರ್ಮಾಣವಾಗಲಿದ್ದು, ಇದರಿಂದ ಸುಮಾರು 1,200 ಜನರಿಗೆ ನೇರ ಉದ್ಯೋಗಾವಕಾಶ ದೊರೆಯಲಿದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಇದೇ ವೇಳೆ, ಸುಮಾರು ₹25 ಕೋಟಿ ವೆಚ್ಚದಲ್ಲಿ ಪ್ರಗತಿ ಹಂತದಲ್ಲಿರುವ ಮೆ. ಚತುರ್ಮುಖಿ ಡೇರಿ ಪ್ರೋಡಕ್ಟ್ಸ್ ಸಂಸ್ಥೆಯ ಐಸ್ಕ್ರೀಂ ಉತ್ಪಾದನಾ ಘಟಕದ ಕಾಮಗಾರಿಯನ್ನೂ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಕೈಗಾರಿಕಾ ಘಟಕಗಳ ನಿರ್ಮಾಣ ಕಾರ್ಯಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಉತ್ಪಾದನೆ ಆರಂಭವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆಯ ವೇಳೆ ಕೈಗಾರಿಕಾ ಪ್ರದೇಶದಲ್ಲಿನ ಮೂಲಭೂತ ಸೌಲಭ್ಯಗಳ ನಿರ್ವಹಣೆ, ಕೈಗಾರಿಕೆಗಳಿಗೆ ಅಗತ್ಯವಿರುವ ಸೇವೆಗಳ ಲಭ್ಯತೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಮಗ್ರ ಚರ್ಚೆ ನಡೆಸಿದರು.

ಕೈಗಾರಿಕಾ ಹೂಡಿಕೆದಾರರಿಗೆ ಯಾವುದೇ ತೊಂದರೆ ಉಂಟಾಗದಂತೆ ರಸ್ತೆ, ನೀರು, ವಿದ್ಯುತ್, ಚರಂಡಿ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಉತ್ತಮ ಮಟ್ಟದಲ್ಲಿ ನಿರ್ವಹಿಸಬೇಕು. ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲವಾಗುವ ವಾತಾವರಣ ನಿರ್ಮಾಣ ಮಾಡುವ ಮೂಲಕ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಳವಾಡ ಕೈಗಾರಿಕಾ ಪ್ರದೇಶದ ಹಂತ–1 ಹಾಗೂ ಹಂತ–2 ಈಗಾಗಲೇ ಸಂಪೂರ್ಣ ಅಭಿವೃದ್ಧಿಗೊಂಡಿದ್ದು, ಹಲವು ಕೈಗಾರಿಕೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹಂತ–3ರ ಅಭಿವೃದ್ಧಿಯೊಂದಿಗೆ ಹೊಸ ಕೈಗಾರಿಕೆಗಳ ಆಗಮನದಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಐ.ಎ.ಡಿ.ಬಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ಅಭಿಯಂತರರು, ಜಂಟಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande