ವಂದೇ ಮಾತರಂ ಮಸೂದೆಗೆ ಕಾಂಗ್ರೆಸ್ ವಿರೋಧ : ಸಂಸದ ರಮೇಶ ಜಿಗಜಿಣಗಿ ಕಿಡಿ
ವಿಜಯಪುರ, 25 ಜುಲೈ (ಹಿ.ಸ.) ಆ್ಯಂಕರ್ : ''ವಂದೇ ಮಾತರಂ'' ಗೀತೆಗೆ ಅವಮಾನ ಮಾಡಿದರೆ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿರುವ ''ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ–2026ಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದು ಅದರ ಡೋಂಗಿ ರಾಷ
ಆಂಡ್


ವಿಜಯಪುರ, 25 ಜುಲೈ (ಹಿ.ಸ.)

ಆ್ಯಂಕರ್ : 'ವಂದೇ ಮಾತರಂ' ಗೀತೆಗೆ ಅವಮಾನ ಮಾಡಿದರೆ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿರುವ 'ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ–2026ಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದು ಅದರ ಡೋಂಗಿ ರಾಷ್ಟ್ರೀಯವಾದವನ್ನು ಮತ್ತೊಮ್ಮೆ ಬಯಲುಗೊಳಿಸಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿ, ಸಾವಿರಾರು ಕ್ರಾಂತಿಕಾರಿಗಳಿಗೆ ಸ್ಫೂರ್ತಿ ನೀಡಿದ್ದ ಬಂಕಿಮಚಂದ್ರ ಚಟರ್ಜಿ ವಿರಚಿತ 'ವಂದೇ ಮಾತರಂ' ಗೀತೆಗೆ ಗೌರವ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಸೂದೆ ಮಂಡಿಸಿದೆ. ಆದರೆ, ಈ ಮಸೂದೆಗೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸುತ್ತಿರುವುದು ರಾಷ್ಟ್ರದ ಜನತೆಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ಟೀಕಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಂಡನೆಯಾದ ಈ ತಿದ್ದುಪಡಿ ಮಸೂದೆಯಲ್ಲಿ, 'ವಂದೇ ಮಾತರಂ' ಗೀತೆಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವಿದೆ. ಈ ಮಸೂದೆ ಕುರಿತು ಚರ್ಚೆ ನಡೆಯಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಗದ್ದಲ ಸೃಷ್ಟಿಸಿ ಸದನದ ಕಾರ್ಯವನ್ನು ಅಸ್ತವ್ಯಸ್ತಗೊಳಿಸಲು ಯತ್ನಿಸಿದರು ಎಂದು ಅವರು ದೂರಿದ್ದಾರೆ.

ಬಂಕಿಮಚಂದ್ರ ಚಟರ್ಜಿ ಅವರು 1875ರಲ್ಲಿ ರಚಿಸಿದ 'ಆನಂದಮಠ' ಕೃತಿಯಲ್ಲಿ 'ವಂದೇ ಮಾತರಂ' ಗೀತೆಗೆ ಜನ್ಮ ನೀಡಿದರು. ಬಳಿಕ 1905ರ ಬಂಗಾಳ ವಿಭಜನೆ ವಿರೋಧಿ ಚಳವಳಿಯಲ್ಲಿ ಈ ಗೀತೆ ರಾಷ್ಟ್ರಭಕ್ತಿಯ ಸಂಕೇತವಾಗಿ ರೂಪುಗೊಂಡಿತು. ಸ್ವಾತಂತ್ರ್ಯ ಹೋರಾಟಗಾರರ ಬಾಯಲ್ಲಿ ಮೊಳಗಿದ ಈ ಗೀತೆ ಅನೇಕ ಕ್ರಾಂತಿಕಾರಿಗಳಿಗೆ ಹೋರಾಟದ ಶಕ್ತಿಯಾಗಿತ್ತು ಎಂದು ಜಿಗಜಿಣಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಪೂರ್ವ ಕಾಲದಿಂದಲೂ 'ವಂದೇ ಮಾತರಂ' ಗೀತೆಯ ಬಗ್ಗೆ ದ್ವಂದ್ವ ನಿಲುವು ಹೊಂದಿದೆ ಎಂದು ಆರೋಪಿಸಿದ ಅವರು, 1923ರ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಪಂಡಿತ ವಿಷ್ಣು ದಿಗಂಬರ ಪಲುಸ್ಕರ್ ಅವರು 'ವಂದೇ ಮಾತರಂ' ಹಾಡಲು ಮುಂದಾದಾಗ ಕೆಲ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಆಗ ಪಲುಸ್ಕರ್ ಅವರು ಇದು ರಾಷ್ಟ್ರೀಯ ಸಭೆ, ಧಾರ್ಮಿಕ ಸಭೆಯಲ್ಲ ಎಂದು ಹೇಳಿ ಗೀತೆಯನ್ನು ಹಾಡಿದ್ದರು ಎಂದು ಉಲ್ಲೇಖಿಸಿದ್ದಾರೆ.

ಮುಸ್ಲಿಂ ಲೀಗ್ ಹಾಗೂ ಮೊಹಮ್ಮದ್ ಅಲಿ ಜಿನ್ನಾ ಅವರ ಒತ್ತಡಕ್ಕೆ ಮಣಿದು ಕಾಂಗ್ರೆಸ್ 'ವಂದೇ ಮಾತರಂ' ಗೀತೆಯ ಮೂಲ ರೂಪವನ್ನು ಬದಲಾಯಿಸಿತು. ಜವಾಹರಲಾಲ್ ನೆಹರು ಅವರ ಕಾಲದಲ್ಲಿಯೂ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ಗೀತೆಯ ಕೆಲವು ಭಾಗಗಳಿಗೆ ಕತ್ತರಿ ಹಾಕಲಾಯಿತು ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟದ ಪರಂಪರೆಗೆ ಗೌರವ ಸಲ್ಲಿಸುವ ಉದ್ದೇಶದಿಂದ 'ವಂದೇ ಮಾತರಂ' ಗೀತೆಗೆ ಕಾನೂನುಬದ್ಧ ರಕ್ಷಣೆ ನೀಡಲು ಮುಂದಾಗಿದೆ. ಆದರೆ ಕಾಂಗ್ರೆಸ್ ಇದಕ್ಕೂ ವಿರೋಧ ವ್ಯಕ್ತಪಡಿಸುತ್ತಿರುವುದು ರಾಷ್ಟ್ರಭಕ್ತಿಯ ವಿಚಾರದಲ್ಲಿಯೂ ಅದರ ರಾಜಕೀಯ ದ್ವಂದ್ವವನ್ನು ತೋರಿಸುತ್ತದೆ ಎಂದು ಜಿಗಜಿಣಗಿ ಹೇಳಿದ್ದಾರೆ.

ದೇಶದ ಜನತೆ ಇಂತಹ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಾಷ್ಟ್ರಗೌರವದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ದೇಶಭಕ್ತರು ಕಾಂಗ್ರೆಸ್ನ ಈ ನಿಲುವನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande