
ಬೆಂಗಳೂರು, 25 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ಕೈಗೊಂಡಿದ್ದ 'ಯುಬಿ100 ವಿಶೇಷ ಸ್ವಚ್ಛತಾ ಅಭಿಯಾನ' ಯಶಸ್ವಿಯಾಗಿ 100ನೇ ಕಸದ ಕಪ್ಪು ತಾಣವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ನಗರದ ತಣಿಸಂದ್ರದಲ್ಲಿರುವ 100ನೇ ಕಸದ ಕಪ್ಪು ತಾಣವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಿದ ಪ್ರದೇಶಕ್ಕೆ ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಾರ್ವಜನಿಕರು ಕಸವನ್ನು ನಿಗದಿತ ಕಸ ಸಂಗ್ರಹ ವಾಹನಗಳಿಗೆ ಮಾತ್ರ ನೀಡಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದ ಮೂಲಕ ಸ್ವಚ್ಛ ಬೆಂಗಳೂರಿನ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.
ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಆರಂಭಗೊಂಡಿದ್ದ ಈ ಅಭಿಯಾನದಲ್ಲಿ 45 ದಿನಗಳೊಳಗೆ 100 ಕಸದ ಕಪ್ಪು ತಾಣಗಳನ್ನು ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿತ್ತು. ನಾಗರಿಕರು, ಸ್ವಯಂಸೇವಾ ಸಂಸ್ಥೆಗಳು, ಸ್ವಯಂಸೇವಕರು ಹಾಗೂ ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ಸಿಬ್ಬಂದಿಯ ಸಹಕಾರದಿಂದ ಈ ಗುರಿಯನ್ನು ಯಶಸ್ವಿಯಾಗಿ ಸಾಧಿಸಲಾಗಿದೆ.
ಅಭಿಯಾನದಡಿ ಕಸ ಹಾಗೂ ತ್ಯಾಜ್ಯ ತೆರವು, ಕಾಲುದಾರಿ ದುರಸ್ತಿ, ರಸ್ತೆ ಬದಿ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಗೋಡೆಗಳ ಸೌಂದರ್ಯೀಕರಣ, ಹಸಿರು ವಾತಾವರಣ ನಿರ್ಮಾಣ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಂದರವಾಗಿಡಲು ನಾಗರಿಕರ ಸಹಭಾಗಿತ್ವ ಅಗತ್ಯವೆಂದು ನಿಗಮ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.