
ಬೆಂಗಳೂರು, 25 ಜುಲೈ (ಹಿ.ಸ.):
ಆ್ಯಂಕರ್:
ರಾಜಧಾನಿಯ ಪ್ರಮುಖ ಜೀವನಾಡಿಯಾಗಿರುವ ಕೆ.ಆರ್. ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗಿನ ಹೊರವರ್ತುಲ ರಸ್ತೆಯನ್ನು ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲು ಹಾಗೂ ನಿತ್ಯದ ವಾಹನ ದಟ್ಟಣೆ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರವು ₹450 ಕೋಟಿ ರೂ. ಬೃಹತ್ ಅನುದಾನವನ್ನು ಮೀಸಲಿಟ್ಟಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳ , ಐಟಿ ಕಾರಿಡಾರ್ಗಳಿರುವ ಈ ಭಾಗದ ಸಮಸ್ಯೆಗಳ ಕುರಿತು ಶನಿವಾರ ಮಹತ್ವದ ಸಮಾಲೋಚನಾ ಸಭೆ ನಡೆಯಿತು. ಕಡುಬೀಸನಹಳ್ಳಿಯಲ್ಲಿರುವ ಹೆಲಿಯೊಸ್ ಬಿಸಿನೆಸ್ ಪಾರ್ಕ್ನಲ್ಲಿ ನಡೆದ ಈ ಸಭೆಯಲ್ಲಿ, ಗೋಲ್ಡ್ಮನ್ ಸ್ಯಾಕ್ಸ್ ಪ್ರತಿನಿಧಿಗಳು, ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ ಪದಾಧಿಕಾರಿಗಳು, ಐಟಿ ಪಾರ್ಕ್ ಮಾಲೀಕರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಸಾಮಾನ್ಯರು ಭಾಗವಹಿಸಿದ್ದರು.
ಮೂಲಸೌಕರ್ಯ ಕೊರತೆಗೆ ಶಾಶ್ವತ ಪರಿಹಾರ:
ಸಭೆಯ ಬಳಿಕ ಮಾತನಾಡಿದ ಸಚಿವರು, ಹೊರವರ್ತುಲ ರಸ್ತೆಯು ದೇಶದ ಆರ್ಥಿಕತೆಗೆ ಮತ್ತು ಐಟಿ ಕ್ಷೇತ್ರದ ಪ್ರಗತಿಗೆ ಅತ್ಯಂತ ನಿರ್ಣಾಯಕ ಕಾರಿಡಾರ್ ಆಗಿದೆ ಎಂದು ಬಣ್ಣಿಸಿದರು. ಆದರೆ ಕಳೆದ ಮೂರು-ನಾಲ್ಕು ದಶಕಗಳಲ್ಲಿ ನಡೆದ ಅನಧಿಕೃತ ಹಾಗೂ ನಿಯಮಬಾಹಿರ ಲೇಔಟ್ ಮತ್ತು ಕಟ್ಟಡಗಳ ನಿರ್ಮಾಣದಿಂದಾಗಿ ರಸ್ತೆ ಅಗಲ, ಒಳಚರಂಡಿ ಮತ್ತು ಪಾದಚಾರಿ ಮಾರ್ಗಗಳ ತೀವ್ರ ಅಭಾವ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉದಾಹರಣೆಗೆ ಜಯನಗರದಲ್ಲಿ ಶೇಕಡಾ 23ರಷ್ಟು ಜಾಗ ರಸ್ತೆಗೆ ಲಭ್ಯವಿದ್ದರೆ, ಈ ಈಸ್ಟ್ ಝೋನ್ನಲ್ಲಿ ಕೇವಲ ಶೇಕಡಾ 8ರಷ್ಟು ಮಾತ್ರ ಲಭ್ಯವಿರುವುದಾಗಿ ಅವರು ವಿವರಿಸಿದರು.
ಅನಧಿಕೃತ ಕಟ್ಟಡಗಳಲ್ಲಿ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿರುವುದರಿಂದ ವಾಹನಗಳು ರಸ್ತೆಯ ಮೇಲೆಯೇ ನಿಲ್ಲುತ್ತಿವೆ ಮತ್ತು ಎಲ್ಲೆಂದರಲ್ಲಿ ರಸ್ತೆ ದಾಟುವುದರಿಂದ ದಟ್ಟಣೆ ದುಪ್ಪಟ್ಟಾಗಿದೆ ಎಂದರು. ಈ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರವು ₹450 ಕೋಟಿ ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಕೇವಲ ರಸ್ತೆಯ ಮೇಲ್ಮೈಯನ್ನು ತೇಪೆ ಹಚ್ಚುವುದಲ್ಲ, ಬದಲಾಗಿ ಸಮಗ್ರ ಮೂಲಸೌಕರ್ಯಗಳನ್ನು ಸರಿಪಡಿಸುವುದೇ ಈ ಯೋಜನೆಯ ಮುಖ್ಯ ಗುರಿ ಎಂದು ಸ್ಪಷ್ಟಪಡಿಸಿದರು.
ಜಂಕ್ಷನ್ಗಳ ವೈಜ್ಞಾನಿಕ ಪುನಾರಚನೆ ಹಾಗೂ ಪ್ರಾಯೋಗಿಕ ಬದಲಾವಣೆ:
ಸಂಚಾರ ದಟ್ಟಣೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಪ್ರಮುಖ ಜಂಕ್ಷನ್ಗಳ ವಿನ್ಯಾಸದಲ್ಲೇ ಬದಲಾವಣೆ ತರಲಾಗುತ್ತಿದೆ. ಜಂಕ್ಷನ್ಗಳ ಮಧ್ಯಭಾಗದಲ್ಲಿ ವಾಹನಗಳು ನೇರವಾಗಿ ಬಲಕ್ಕೆ ತಿರುಗುವುದನ್ನು ತಡೆದು, ವಾಹನಗಳನ್ನು ಸ್ವಲ್ಪ ಮುಂದೆ ತಿರುವು ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುವುದು.
ಇದರಿಂದ 'ಫ್ರೀ ಲೆಫ್ಟ್' ಅಥವಾ ಯು-ಟರ್ನ್ ತೆಗೆದುಕೊಳ್ಳಲು ವಾಹನ ಸವಾರರಿಗೆ ಅತ್ಯಂತ ಸುಗಮ ಮಾರ್ಗ ದೊರೆಯಲಿದೆ. ಪ್ರತಿ ಜಂಕ್ಷನ್ನ ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ವಿನ್ಯಾಸ ರೂಪಿಸಲಾಗಿದ್ದು, ಈ ಹೊಸ ವ್ಯವಸ್ಥೆಯನ್ನು ಕಾಯಂಗೊಳಿಸುವ ಮುನ್ನ ಮುಂದಿನ ಮೂರು ತಿಂಗಳ ಕಾಲ ಆರ್ಸಿಸಿ ಬ್ಯಾರಿಕೇಡ್ಗಳನ್ನು ಬಳಸಿ ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII