ಕುತೂಹಲಕರ ಘಟ್ಟಕ್ಕೆ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ
ಬಾಗಲಕೋಟೆ, 25 ಜುಲೈ (ಹಿ.ಸ.) ಆ್ಯಂಕರ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಸಂಘಟನೆಗೆ ಹೊಸ ಚೈತನ್ಯ ತುಂಬುವ ಪ್ರಕ್ರಿಯೆ ಆರಂಭಗೊಂಡಿದೆ.
ಪೈಪೋಟಿ


ಬಾಗಲಕೋಟೆ, 25 ಜುಲೈ (ಹಿ.ಸ.)

ಆ್ಯಂಕರ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಸಂಘಟನೆಗೆ ಹೊಸ ಚೈತನ್ಯ ತುಂಬುವ ಪ್ರಕ್ರಿಯೆ ಆರಂಭಗೊಂಡಿದೆ.

ಇದೇ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇದೀಗ ಕುತೂಹಲಕರ ಘಟ್ಟ ತಲುಪಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಸರಣಿ ಸಭೆಗಳತ್ತ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಗಮನ ಕೇಂದ್ರೀಕೃತವಾಗಿದೆ.

ಪಕ್ಷದ ವರಿಷ್ಠರು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ಎಐಸಿಸಿ ವೀಕ್ಷಕರಾಗಿ ಡಾ. ಬಾಲಯ್ಯ ನಾಯಕ್ ಅವರನ್ನು ನೇಮಕ ಮಾಡಿದ್ದು, ಜುಲೈ 25ರಿಂದ 30ರವರೆಗೆ ವಿವಿಧ ಹಂತಗಳಲ್ಲಿ ಅಭಿಪ್ರಾಯ ಸಂಗ್ರಹ ಹಾಗೂ ಸಂಘಟನಾ ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಿ ಪಕ್ಷದ ಹೈಕಮಾಂಡ್ಗೆ ಸಲ್ಲಿಸಲಾಗುವುದು ಎಂದು ವೀಕ್ಷಕ ಡಾ. ಬಾಲಯ್ಯ ತಿಳಿಸಿದ್ದಾರೆ.

ಐದು ದಿನಗಳ ಅಭಿಪ್ರಾಯ ಸಂಗ್ರಹ

ಜುಲೈ 25ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮೊದಲ ಹಂತದ ಸಭೆಗಳು ಆರಂಭವಾಗಲಿದ್ದು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಯಲಿದೆ. ಬಳಿಕ ಜಿಲ್ಲಾ ಪದಾಧಿಕಾರಿಗಳು ಮತ್ತು ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರೊಂದಿಗೆ ಪ್ರತ್ಯೇಕ ಸಭೆ ನಡೆಯಲಿದೆ.

ಜುಲೈ 26, 27 ಹಾಗೂ 28ರಂದು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಮುಖಂಡರು, ಹಿರಿಯ ಕಾರ್ಯಕರ್ತರು ಹಾಗೂ ಸಂಘಟನಾ ನಾಯಕರೊಂದಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಪ್ರತ್ಯೇಕ ಸಭೆಗಳು ನಡೆಯಲಿವೆ. ಜುಲೈ 29ರಂದು ವಿವಿಧ ಸಂಘಟನೆಗಳ ಪ್ರತಿನಿಧಿಗಳು, ನಾಗರಿಕ ಸಮಾಜದ ಮುಖಂಡರು ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಲಾಗುತ್ತದೆ. ಅಂತಿಮವಾಗಿ ಜುಲೈ 30ರಂದು ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

*ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ*

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಲವಾರು ನಾಯಕರು ಆಸಕ್ತಿ ತೋರಿರುವುದರಿಂದ ಆಯ್ಕೆ ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಲಿ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಈಗಾಗಲೇ ಬೃಹತ್ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಬೇಕೆಂಬ ಚರ್ಚೆ ಬಹುಕಾಲದಿಂದ ನಡೆಯುತ್ತಿದ್ದರೂ, ಹೊಸ ವ್ಯವಸ್ಥೆ ಆಗುವವರೆಗೆ ನಂಜಯ್ಯನಮಠ ಅವರೇ ಮುಂದುವರಿಯುವಂತೆ ಪಕ್ಷ ಸೂಚಿಸಿತ್ತು.

ಇದೀಗ ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಗಿರುವುದರಿಂದ, ಅವರು ಮುಂದುವರಿಯುವರೋ ಅಥವಾ ಹೊಸ ಮುಖಕ್ಕೆ ಅವಕಾಶ ಸಿಗುವುದೋ ಎಂಬ ಕುತೂಹಲ ಹೆಚ್ಚಾಗಿದೆ. ಕೆಲ ನಾಯಕರು 2028ರ ವಿಧಾನಸಭೆ ಚುನಾವಣೆಯವರೆಗೂ ಹಾಲಿ ಅಧ್ಯಕ್ಷರನ್ನೇ ಮುಂದುವರಿಸಬೇಕೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.

*ಚರ್ಚೆಗೆ ಕಾರಣವಾದ ಬೆಳವಣಿಗೆಗಳು*

ಅಧ್ಯಕ್ಷ ಸ್ಥಾನಾಕಾಂಕ್ಷಿಗಳ ಪೈಕಿ ಹಾಲಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹಾಗೂ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ್ ಹದ್ಲಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಆದರೆ ಇತ್ತೀಚಿನ ಕೆಲವು ರಾಜಕೀಯ ಬೆಳವಣಿಗೆಗಳು ಅವರ ಸಾಧ್ಯತೆಗಳ ಕುರಿತು ಪಕ್ಷದೊಳಗೆ ಚರ್ಚೆಗೆ ಕಾರಣವಾಗಿವೆ.

ನಾಗರಾಜ್ ಹದ್ಲಿ ಅವರು ಆರ್ಎಸ್ಎಸ್ ಮುಖಂಡರನ್ನು ಭೇಟಿ ಮಾಡಿರುವ ವಿಚಾರ ಪಕ್ಷದ ಕೆಲವು ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ ಎಸ್.ಜಿ. ನಂಜಯ್ಯನಮಠ ಅವರು ಹಿರಿಯ ರಾಜಕಾರಣಿ ಎಚ್. ವಿಶ್ವನಾಥ್ ಅವರೊಂದಿಗೆ ಕಾಣಿಸಿಕೊಂಡ ಘಟನೆ ಕುರಿತೂ ಪಕ್ಷದೊಳಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬೆಳವಣಿಗೆಗಳು ಅಂತಿಮ ಆಯ್ಕೆಯ ಮೇಲೆ ಯಾವುದೇ ಪರಿಣಾಮ ಬೀರುತ್ತವೆಯೇ ಎಂಬುದರ ಕುರಿತು ಅವರ ಬೆಂಬಲಿಗರಲ್ಲಿ ಆತಂಕ ವ್ಯಕ್ತವಾಗಿದೆ.

*ವೀಕ್ಷಕರ ಅಭಿಪ್ರಾಯ ಸಂಗ್ರಹಕ್ಕೆ ಮಹತ್ವ*

ಡಾ. ಬಾಲಯ್ಯ ನಾಯಕ್ ಅವರ ನೇತೃತ್ವದಲ್ಲಿ ನಡೆಯಲಿರುವ ಅಭಿಪ್ರಾಯ ಸಂಗ್ರಹದಲ್ಲಿ ವಿವಿಧ ಹಂತದ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲಿದ್ದಾರೆ. ಯಾರ ಪರ ಹೆಚ್ಚು ಬೆಂಬಲ ವ್ಯಕ್ತವಾಗುತ್ತದೆ ಎಂಬುದು ಈ ಸಭೆಗಳಲ್ಲೇ ಸ್ಪಷ್ಟ ಚಿತ್ರಣ ನೀಡುವ ಸಾಧ್ಯತೆ ಇದೆ. ಅಂತಿಮವಾಗಿ ವೀಕ್ಷಕರ ವರದಿ ಆಧರಿಸಿ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತು ತೀರ್ಮಾನ ಕೈಗೊಳ್ಳಲಿದೆ.

*ಮುಂದಿರುವ ಚುನಾವಣೆಗಳ ಸವಾಲು*

2028ರ ವಿಧಾನಸಭೆ ಚುನಾವಣೆಯ ಜೊತೆಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಿರುವುದರಿಂದ, ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕನ ಆಯ್ಕೆ ಕಾಂಗ್ರೆಸ್ಗೆ ಮಹತ್ವದ ವಿಚಾರವಾಗಿದೆ. ಇದೇ ಕಾರಣಕ್ಕಾಗಿ ಪಕ್ಷದ ವರಿಷ್ಠರು ಸೂಕ್ತ ಪರಿಶೀಲನೆಯೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಸುತ್ತಿದ್ದು, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ನ ಮುಂದಿನ ಸಾರಥಿ ಯಾರು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande