
ವಿಜಯಪುರ, 25 ಜುಲೈ (ಹಿ.ಸ.)
ಆ್ಯಂಕರ್ : ವಿಶೇಷ ಚೇತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಚಿಕಿತ್ಸೆ ಹಾಗೂ ಸಮಗ್ರ ಅಭಿವೃದ್ಧಿಯ ಅವಕಾಶ ಕಲ್ಪಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ವಿಜಯಪುರದಲ್ಲಿ ಸ್ಥಾಪಿಸಲಾಗಿರುವ ಬಿ.ಎಲ್.ಡಿ.ಇ–ರಘುಕುಲ ಸಮನ್ವಯ ಶಾಲೆಯನ್ನು ಜುಲೈ 27ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ನಗರದ ಬಿ.ಎಂ. ಪಾಟೀಲ ರಸ್ತೆಯ ಪ್ರಕೃತಿ ಕಾಲೋನಿಯಲ್ಲಿ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮಾಜದ ಮುಖ್ಯವಾಹಿನಿಯಲ್ಲಿ ವಿಶೇಷ ಚೇತನ ಮಕ್ಕಳಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬ ದೃಷ್ಟಿಕೋನದಿಂದ ಈ ಸಮನ್ವಯ ಶಾಲೆಯನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ದೈಹಿಕ, ಬೌದ್ಧಿಕ, ಶ್ರವಣ, ದೃಷ್ಟಿ ಹಾಗೂ ಕಲಿಕಾ ನ್ಯೂನ್ಯತೆಗಳನ್ನು ಹೊಂದಿರುವ ಮಕ್ಕಳ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಣ, ತರಬೇತಿ ಮತ್ತು ಚಿಕಿತ್ಸೆಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ವಿನೂತನ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ವಿಶೇಷ ತರಬೇತಿ ಪಡೆದ ಶಿಕ್ಷಕರಿಂದ ಮಕ್ಕಳಿಗೆ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಬೋಧನೆ ಮಾಡಲಾಗುತ್ತದೆ. ಜೊತೆಗೆ ಫಿಸಿಯೋಥೆರಪಿ, ಶ್ರವಣ ಚಿಕಿತ್ಸಾ ಸೇವೆಗಳು, ಮನೋವೈಜ್ಞಾನಿಕ ಸಮಾಲೋಚನೆ, ವಿಶೇಷ ಶಿಕ್ಷಣ ಹಾಗೂ ವಿವಿಧ ಪುನರ್ವಸತಿ ಸೇವೆಗಳ ಮೂಲಕ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ರೀತಿಯ ನೆರವು ನೀಡಲಾಗುತ್ತದೆ.
ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು, ಅವರ ಪ್ರತಿಭೆಯನ್ನು ಗುರುತಿಸಿ ಅಭಿವೃದ್ಧಿಪಡಿಸುವುದು ಹಾಗೂ ಸಾಧ್ಯವಾದ ಮಟ್ಟಿಗೆ ಸಾಮಾನ್ಯ ಮಕ್ಕಳೊಂದಿಗೆ ಬೆರೆತು ಶಿಕ್ಷಣ ಪಡೆಯುವ ವಾತಾವರಣ ನಿರ್ಮಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.
ಈ ಸಮನ್ವಯ ಶಾಲೆಯು ವಿಶೇಷ ಚೇತನ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದ್ದು, ಪೋಷಕರಿಗೂ ಉತ್ತಮ ಬೆಂಬಲ ವ್ಯವಸ್ಥೆಯಾಗಿ ಪರಿಣಮಿಸಲಿದೆ. ವಿಶೇಷ ಶಿಕ್ಷಣದ ಜೊತೆಗೆ ಆರೋಗ್ಯ, ಪುನರ್ವಸತಿ ಮತ್ತು ಮಾನಸಿಕ ಬೆಂಬಲ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
ಕಾರ್ಯಕ್ರಮದಲ್ಲಿ ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕ ರಾಜೇಂದ್ರ ರುಣವಾಲ, ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ಸಂಭವ ಸಂಸ್ಥೆಯ ನಿರ್ದೇಶಕರು, ವಿವಿಧ ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande