

ಬಾಗಲಕೋಟೆ, 25 ಜುಲೈ (ಹಿ.ಸ.)
ಆ್ಯಂಕರ್ : ಆಷಾಢ ಏಕಾದಶಿ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಐತಿಹಾಸಿಕ ಅಪ್ಪಾಸಾಹೇಬ್ ವಿಠ್ಠಲ ಮಂದಿರದಲ್ಲಿ ಶನಿವಾರ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ವಿಠ್ಠಲ ಹಾಗೂ ರುಕ್ಮಿಣಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ದೇವಾಲಯವನ್ನು ಆಕರ್ಷಕವಾಗಿ ವಿದ್ಯುತ್ ದೀಪಾಲಂಕಾರ ಹಾಗೂ ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ವಿಶೇಷವಾಗಿ ವಿಠ್ಠಲ–ರುಕ್ಮಿಣಿ ಮೂರ್ತಿಗಳಿಗೆ ಮಾಡಲಾಗಿದ್ದ ಭವ್ಯ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು. ದೇವರ ದಿವ್ಯ ಅಲಂಕಾರವನ್ನು ಕಣ್ತುಂಬಿಕೊಂಡ ಭಕ್ತರು ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿ ಕುಟುಂಬದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಬೇಡಿಕೊಂಡರು.
ಬೆಳಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ಭಕ್ತರ ದಟ್ಟಣೆ ಕಂಡುಬಂದಿತು. ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಾಲಯದ ಆಡಳಿತ ಮಂಡಳಿ ಹಾಗೂ ಸ್ವಯಂಸೇವಕರು ದರ್ಶನ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದರು.
ದರ್ಶನದ ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಅಲ್ಲದೆ, ದೇವರ ನಾಮಸ್ಮರಣೆಯ ಸಂಕೇತವಾಗಿ ಭಕ್ತರ ಹಣೆಗೆ ನಾಮ ಕೊರೆಯುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ವಿಶೇಷ ಸೇವೆಯಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡು ಧಾರ್ಮಿಕ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು.
ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ದಿನವಿಡೀ ಭಜನೆ, ಕೀರ್ತನೆ ಹಾಗೂ ವಿಠ್ಠಲ ನಾಮಸಂಕೀರ್ತನೆಯ ಧ್ವನಿ ದೇವಸ್ಥಾನದ ಆವರಣದಲ್ಲಿ ಮೊಳಗುತ್ತಿತ್ತು. ಭಕ್ತರು “ವಿಠ್ಠಲ... ವಿಠ್ಠಲ...” ಎಂಬ ಜಯಘೋಷ ಮೊಳಗಿಸುತ್ತಾ ಭಕ್ತಿ ಪರವಶರಾದ ದೃಶ್ಯಗಳು ಕಂಡುಬಂದವು.
ದೇವಾಲಯದ ವತಿಯಿಂದ ಕೈಗೊಂಡಿದ್ದ ಸಮರ್ಪಕ ವ್ಯವಸ್ಥೆ, ಸ್ವಚ್ಛತೆ, ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ನೀಡಿದ ಆತ್ಮೀಯ ಸ್ವಾಗತಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಭಕ್ತಿಯ ಸಾಗರವಾಗಿ ಮಾರ್ಪಟ್ಟಿದ್ದ ಅಪ್ಪಾಸಾಹೇಬ್ ವಿಠ್ಠಲ ಮಂದಿರದಲ್ಲಿ ಆಷಾಢ ಏಕಾದಶಿ ಸಂಭ್ರಮ ಸಡಗರ, ಶ್ರದ್ಧೆ ಮತ್ತು ಆಧ್ಯಾತ್ಮಿಕ ಉತ್ಸಾಹದೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande