
ಬೆಂಗಳೂರು, 24 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಂಡಳಿಯ ಯೋಜನೆಗಳ ಪ್ರಗತಿ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ದೇಶನಗಳನ್ನು ನೀಡಿದರು.
ರಾಜ್ಯದ ಎಲ್ಲಾ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸಮೀಕ್ಷೆ ನಡೆಸುವಂತೆ ಸಚಿವರು ಸೂಚಿಸಿದರು. ಎಲ್ಲಾ ಪ್ರದೇಶಗಳಲ್ಲಿ ಚರಂಡಿ ಹಾಗೂ ಎಸ್ಟಿಪಿ ಘಟಕಗಳನ್ನು ಸರಿಯಾಗಿ ಮ್ಯಾಪ್ ಮಾಡಿ, ಆಯಾ ಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾಮಗಾರಿ ವಿಳಂಬವಾಗುತ್ತಿರುವ ಸ್ಥಳಗಳನ್ನು ಗುರುತಿಸಿ ಗುತ್ತಿಗೆದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಸೂಕ್ತ ಕಾರಣ ಇಲ್ಲದೇ ಅನಗತ್ಯವಾಗಿ ಹಣ ಬಿಡುಗಡೆ ಮಾಡುವುದನ್ನು ತಡೆಗಟ್ಟಲು, ಗುತ್ತಿಗೆದಾರ ಏಜೆನ್ಸಿಗಳಿಗೆ ಅನುದಾನ ಬಿಡುಗಡೆ ಮಾಡುವಾಗ ವಿಶ್ವಬ್ಯಾಂಕ್ ಅನುಸರಿಸುವ ಮಾದರಿಯನ್ನು ಅಳವಡಿಸಿಕೊಂಡು ಸೂಕ್ತ 'ಪಾಲಿಸಿ ಫ್ರೇಮ್ವರ್ಕ್' ರೂಪಿಸಲು ಸೂಚಿಸಿದರು.
ನೀರು ಪೋಲಾಗುವುದನ್ನು ಹಾಗೂ ಸಿಬ್ಬಂದಿ ದುರುಪಯೋಗವನ್ನು ತಡೆಯಲು 'ಸ್ಮಾರ್ಟ್ ಮೀಟರ್' ಅಳವಡಿಸಲು ಸಲಹೆ ನೀಡಿದ ಸಚಿವರು, ಆರಂಭದಲ್ಲಿ ಇದನ್ನು ಪ್ರಾಯೋಗಿಕ ಯೋಜನೆಯಾಗಿ (ಪೈಲಟ್ ಪ್ರಾಜೆಕ್ಟ್) ಜಾರಿಗೆ ತಂದು ಆದಾಯ ಹೆಚ್ಚಿಸಿಕೊಳ್ಳುವ ಮಾದರಿಯನ್ನು ಪರಿಶೀಲಿಸಲು ತಿಳಿಸಿದರು.
ಯೋಜನಾ ವರದಿ ತಯಾರಿಸುವಾಗ ಮತ್ತು ಎಸ್ಟಿಪಿ ನಿರ್ಮಾಣಕ್ಕೆ ಜಾಗ ಕಾಯ್ದಿರಿಸುವಾಗ ಸ್ಥಳೀಯ ಸಂಸ್ಥೆಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಚರ್ಚಿಸಬೇಕು. ಒಮ್ಮೆ ಜಾಗ ಅಂತಿಮಗೊಂಡ ಮೇಲೆ ಪದೇ ಪದೇ ಬದಲಾಯಿಸುವುದನ್ನು ತಡೆಯಬೇಕು ಎಂದು ತಾಂತ್ರಿಕ ತಂಡಕ್ಕೆ ತಾಕೀತು ಮಾಡಿದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿಯನ್ನು ಹೊರತುಪಡಿಸಿ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಸೌಕರ್ಯ ಕಲ್ಪಿಸುವ ಜವಾಬ್ದಾರಿಯನ್ನು ಮಂಡಳಿ ಹೊಂದಿದೆ. ಪ್ರಸ್ತುತ ರಾಜ್ಯದಲ್ಲಿ 256 ನಗರ ಪ್ರದೇಶಗಳಿಗೆ ಶಾಶ್ವತ ಮೇಲ್ಮೈ ಮೂಲಗಳಿಂದ ಸುರಕ್ಷಿತ ಕುಡಿಯುವ ನೀರು ಹಾಗೂ ಉಳಿದ 60 ಪಟ್ಟಣಗಳಿಗೆ ಅಂತರ್ಜಲ ಮೂಲದಿಂದ ನೀರು ಪೂರೈಸಲಾಗುತ್ತಿದೆ.
.
ಮಂಡಳಿಯಿಂದ ಇದುವರೆಗೆ ಒಟ್ಟು 649 ನೀರು ಸರಬರಾಜು ಯೋಜನೆಗಳು ಹಾಗೂ 181 ಒಳಚರಂಡಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದಕ್ಕಾಗಿ ಒಟ್ಟು ರೂ. 16,887.84 ಕೋಟಿ ವೆಚ್ಚ ಮಾಡಲಾಗಿದ್ದು, ಕುಡಿಯುವ ನೀರಿಗೆ ರೂ. 11,531.91 ಕೋಟಿ ಹಾಗೂ ಒಳಚರಂಡಿ ಯೋಜನೆಗಳಿಗೆ ರೂ. 5,355.93 ಕೋಟಿ ವಿನಿಯೋಗಿಸಲಾಗಿದೆ.
2026-27ನೇ ಸಾಲಿನ ಬಜೆಟ್ನಲ್ಲಿ ರಾಜ್ಯ ಯೋಜನೆಯಡಿ ರೂ. 700.00 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.
ಕಲಬುರಗಿ ನಗರಕ್ಕೆ 24/7 ಶಾಶ್ವತ ಕುಡಿಯುವ ನೀರು ಪೂರೈಸಲು ರೂ. 1,863 ಕೋಟಿ ವೆಚ್ಚದ ಡಿಪಿಆರ್ಗೆ ತಾತ್ವಿಕ ಅನುಮೋದನೆ ದೊರೆತಿದೆ. ಹಾಗೆಯೇ ಮೈಸೂರು ನಗರಕ್ಕೆ ಕಾವೇರಿ ನದಿಯಿಂದ (ಉಂಡವಾಡಿ) ಸಗಟು ನೀರು ಸರಬರಾಜು ಯೋಜನೆ (ಅಂದಾಜು ವೆಚ್ಚ ರೂ. 595 ಕೋಟಿ) ಸೇರಿದಂತೆ ಹಲವು ಬೃಹತ್ ಯೋಜನೆಗಳ ಕಾಮಗಾರಿ ಚಾಲ್ತಿಯಲ್ಲಿದೆ.
ಅಮೃತ್ 2.0 ಯೋಜನೆಯಡಿ ಒಟ್ಟು ರೂ. 9,590 ಕೋಟಿ ಮೊತ್ತದ 227 ನೀರು ಸರಬರಾಜು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 215 ಯೋಜನೆಗಳಿಗೆ ಗುತ್ತಿಗೆ ವಹಿಸಲಾಗಿದೆ.
ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಶಿವಲೀಲಾ ವಿನಯ್ ಕುಲಕರ್ಣಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII