
ಕೊಪ್ಪಳ , 24 ಜುಲೈ (ಹಿ.ಸ.):
ಆ್ಯಂಕರ್ : ಜಿಲ್ಲೆಯಲ್ಲಿ ಸುಮಾರು 6500 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಾವಿನ ಬೆಳೆ ಬೆಳೆದಿದ್ದು, ಉತ್ತಮ ಗುಣಮಟ್ಟದ ಹಣ್ಣು ಹಾಗೂ ಹೆಚ್ಚಿನ ಇಳುವರಿ ಪಡೆಯಲು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅನುಸರಿಸಬೇಕಾದ ತೋಟ ನಿರ್ವಹಣಾ ಕ್ರಮಗಳ ಕುರಿತು ತೋಟಗಾರಿಕೆ ಇಲಾಖೆ ರೈತರಿಗೆ ಸಮಗ್ರ ಮಾರ್ಗಸೂಚಿ ಹಾಗೂ ಸಲಹೆಗಳನ್ನು ನೀಡಿದೆ.
ಮಳೆಗಾಲದ ಅವಧಿಯಲ್ಲಿ ತೋಟದ ಸ್ವಚ್ಛತೆ, ಸವರುವಿಕೆ, ಕೀಟ-ರೋಗ ನಿಯಂತ್ರಣ, ನೀರಿನ ನಿರ್ವಹಣೆ ಮತ್ತುಪೋಷಕಾಂಶಗಳ ಸಮರ್ಪಕ ಬಳಕೆ ಅತ್ಯಂತ ಅಗತ್ಯವಾಗಿದೆ. ಈ ಕ್ರಮಗಳನ್ನು ಅನುಸರಿಸುವುದರಿಂದ ಮಾವಿನ ಮರಗಳ ಆರೋಗ್ಯ ಸುಧಾರಿಸಿ, ಹಣ್ಣಿನ ಗುಣಮಟ್ಟ ಹೆಚ್ಚುತ್ತದೆ.
ತೋಟದ ಸ್ವಚ್ಛತೆಗೆ ಆದ್ಯತೆ:
ಮಾವು ತೋಟಗಳಲ್ಲಿ ಕಳೆ, ಒಣಗಿದ ಎಲೆಗಳು ಹಾಗೂ ರೋಗಬಾಧಿತ ಕೊಂಬೆಗಳನ್ನು ತೆಗೆದುಹಾಕಬೇಕು. ಮಾಗಿ ಉಳುಮೆ ಮಾಡುವ ಮೂಲಕ ಕಳೆ ಮತ್ತು ಕೀಟಗಳನ್ನು ನಿಯಂತ್ರಿಸಬಹುದು. ತೆಂಗಿನ ಗರಿ, ಒಣ ಎಲೆಗಳು ಮುಂತಾದವುಗಳನ್ನು ಮಲ್ಚಿಂಗ್ಗೆ ಬಳಸುವುದರಿಂದ ಮಣ್ಣಿನ ತೇವಾಂಶ ಕಾಪಾಡಬಹುದು. ಜೊತೆಗೆ ಸಾಲುಗಳ ನಡುವೆ ಸೋಯಾಬೀನ್, ಶೇಂಗಾ, ಅಲಸಂದಿ, ಹೆಸರು, ಉದ್ದು ಹಾಗೂ ಹುರುಳಿ ಮುಂತಾದ ಬೆಳೆಗಳನ್ನು ಬೆಳೆಯಬಹುದು.
ಮರಗಳ ಸವರುವಿಕೆ (ಪ್ರೂನಿಂಗ್):
ಹಳೆಯ, ಒಣಗಿದ ಹಾಗೂ ರೋಗಬಾಧಿತ ಹಾಗೂ ಅಡ್ಡಿಯಾಗಿರುವ ಕೊಂಬೆಗಳನ್ನು ತೆಗೆದುಹಾಕಬೇಕು. ಪ್ರತಿ 2 ವರ್ಷಗಳಿಗೊಮ್ಮೆ ವೈಜ್ಞಾನಿಕವಾಗಿ ಸವರುವಿಕೆ ಮಾಡುವುದು ಸೂಕ್ತ. ಜೂನ್-ಜುಲೈ ತಿಂಗಳು ಸವರುವಿಕೆಗೆ ಉತ್ತಮ ಸಮಯವಾಗಿದೆ. ಕತ್ತರಿಸಿದ ಭಾಗಗಳಿಗೆ ಕಾಪರ್ ಆಕ್ಸಿಕ್ಲೋರೈಡ್ ಪೇಸ್ಟ್ ಹಚ್ಚಬೇಕು. ಲೋರಾಂಥಸ್ ಪರಾವಲಂಬಿ ಕಸ ಕಂಡುಬಂದರೆ ತಕ್ಷಣವೇ ತೆಗೆದುಹಾಕಬೇಕು.
ಕೀಟ ನಿಯಂತ್ರಣ ಕ್ರಮಗಳು:
ಮಾವಿನ ಮರಗಳಲ್ಲಿ ಕಂಡುಬರುವ ಕಾಂಡ ಕೊರಕ ಹಾಗೂ ತೊಗಟೆ ತಿನ್ನುವ ಹುಳುಗಳಿಂದ ರಕ್ಷಿಸಲು ಕಾಂಡವನ್ನು ಸ್ವಚ್ಛಗೊಳಿಸಿ ರಕ್ಷಣಾ ಪೇಸ್ಟ್ ಬಳಿಯಬೇಕು. ರಕ್ಷಣಾ ಪೇಸ್ಟ್ ಅನ್ನು ಪ್ರತಿ ಲೀಟರ್ ನೀರಿಗೆ ಸುಣ್ಣದ ಪುಡಿ -400 ಗ್ರಾಂ, ಕಾಪರ್ ಆಕ್ಸಿಕ್ಲೋರೈಡ್ -25 ಗ್ರಾಂ, ಕ್ಲೋರೋಪೈರಿಪಾಸ್ -10 ಮಿ. ಲೀ. ಹಾಗೂ ಬಿಳಿ ಸಿಮೆಂಟ್ -25 ಗ್ರಾಂ ಬೆರೆಸಿ ತಯಾರಿಸಬೇಕು. ಅಗತ್ಯವಿದ್ದಲ್ಲಿ ಕೋರೋಪೈರಿಪಾಸ್ ದ್ರಾವಣವನ್ನು (10-15 ಮಿ.ಲೀ.)ಬಳಸಿ ಕಾಂಡದಲ್ಲಿನ ರಂಧ್ರಗಳನ್ನು ಮುಚ್ಚಬೇಕು. ನಂತರ ಕೋರೋಪೈರಿಪಾಸ್ 4 ಮಿ.ಲೀ./ಲೀ ನೀರಿನ ದ್ರಾವಣವನ್ನು ಸಿಂಪಡಿಸಬೇಕು. ರಕ್ಷಣಾ ಪೇಸ್ಟ್ ಅನ್ನು ನೆಲದಿಂದ 3.5-4 ಅಡಿ ಎತ್ತರದವರೆಗೆ ಬಳಿಯಬೇಕು.
ನೀರಿನ ಸಮರ್ಪಕ ನಿರ್ವಹಣೆ:
ಮಳೆ ಕೊರತೆಯಿದ್ದರೆ ನಿಯಮಿತವಾಗಿ ನೀರುಣಿಸಬೇಕು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಿಡಗಳಿಗೆ ಹನಿ ನೀರಾವರಿ ಮಾಡಿ. 5 ವರ್ಷ ಮೇಲ್ಪಟ್ಟ ಮರಗಳಿಗೆ 15–20 ದಿನಗಳಿಗೊಮ್ಮೆ ರಿಂಗ್ ವಿಧಾನದಲ್ಲಿ ನೀರುಣಿಸಬೇಕು. ಇಳಿಜಾರು ಪ್ರದೇಶಗಳಲ್ಲಿ ಟ್ರೆಂಚ್ ನಿರ್ಮಿಸಿ ಮಳೆನೀರು ಸಂಗ್ರಹಿಸುವುದರಿಂದ ನೀರಿನ ಸಂರಕ್ಷಣೆ ಸಾಧ್ಯ.
ಸುಣ್ಣದ ಬಳಕೆ ಮತ್ತು ಪ್ರಯೋಜನಗಳು:
ಮಳೆಗಾಲದಲ್ಲಿ ಸುಣ್ಣದ ಕಲ್ಲು, ಡೊಲೊಮೈಟ್ ಅಥವಾ ಜಿಪ್ಸಮ್ ಬಳಸಿ ಮಣ್ಣಿಗೆ ಸೇರಿಸುವುದು ಅಗತ್ಯ. ಗಿಡದ ವಯಸ್ಸಿನ ಆಧಾರದ ಮೇಲೆ 5-10 ವರ್ಷದ ಗಿಡಕ್ಕೆ 1 ಕೆ.ಜಿ., 10-15 ವರ್ಷದ ಗಿಡಕ್ಕೆ 2.5 ಕೆ.ಜಿ., 15-20 ವರ್ಷದ ಗಿಡಕ್ಕೆ 5 ಕೆ. ಜಿ ಯಂತೆ ಮಣ್ಣಿಗೆ ಸೇರಿಸಬೇಕು. ಒಮ್ಮೆ ನೀಡಿದ ನಂತರ ಸಾಮಾನ್ಯವಾಗಿ 2 ರಿಂದ 3 ವರ್ಷಗಳವರೆಗೆ ಮರುಬಳಕೆ ಅಗತ್ಯವಿಲ್ಲ .
ತೋಟದಲ್ಲಿ ಸುಣ್ಣದ ಪ್ರಯೋಜನಗಳು :
ಬೇರು ಮತ್ತು ಗಿಡದ ಬೆಳವಣಿಗೆ ಉತ್ತಮಗೊಳಿಸುತ್ತದೆ, ರೆಂಬೆ ಒಣಗುವುದು, ಕಾಂಡ ಬಿರುಕು ಹಾಗೂ ಶೂಟ್ ಡೈ ಬ್ಯಾಕ್ ಸಮಸ್ಯೆ ಕಡಿಮೆ ಮಾಡುತ್ತದೆ. ಹಣ್ಣಿನ ಗುಣಮಟ್ಟವನ್ನು ಹೆಚ್ಚಿಸಿ ಸ್ಪಾಂಜಿ ಟಿಷ್ಯೂ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಾವಿನ ಓಟೆಯ ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸುತ್ತದೆ.
ಗಿಡಗಳಿಗೆ ಕೊಟ್ಟಿಗೆ/ತಿಪ್ಪೆ/ಎರೆಹುಳು ಗೊಬ್ಬರ (ಈಙಒ), ರಾಸಾಯನಿಕ ಗೊಬ್ಬರಗಳಾದ ಯೂರಿಯಾ, ಸೂಪರ್ ಫಾಸ್ಫೇಟ್, ಮ್ಯೂರೇಟ್ ಆಫ್ ಪೊಟ್ಯಾಶ್ ಹಾಗೂ ಲಘು ಪೋಷಕಾಂಶಗಳಾದ ಸತು, ಕಬ್ಬಿಣ, ಮ್ಯಾಗ್ನೀಷಿಯಂ, ತಾಮ್ರ ಮತ್ತು ಬೋರಾನ್ ನೀಡಬೇಕು. ಇದರ ಜೊತೆಗೆ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಸುಡೋಮೊನಾಸ್ ಪೋಲೀರೊಸೆನ್ಸ್, ವ್ಯಾಮ್, ಅಜೋಸ್ಪಿರಿಲ್ಲಮ್ ಮತ್ತು ಪಿ.ಎಸ್.ಬಿ ಗಳನ್ನು ಮಿಶ್ರಣ ಮಾಡಿ ಗಿಡಗಳಿಗೆ ಹಾಕಲು ಶಿಫಾರಸು ಮಾಡಲಾಗಿದೆ.
ಗಿಡಗಳ ವಯಸ್ಸಿನ ಆಧಾರದ ಮೇಲೆ ಗೊಬ್ಬರ ನೀಡುವ ಪ್ರಮಾಣ (ಪ್ರತಿ ಗಿಡಕ್ಕೆ ಕೆ.ಜಿ.ಗಳಲ್ಲಿ):
5 ವರ್ಷದ ಗಿಡಕ್ಕೆ ಕೊಟ್ಟಿಗೆ/ತಿಪ್ಪೆ/ಎರೆಹುಳು ಗೊಬ್ಬರ 50 ಕೆ.ಜಿ, ಯೂರಿಯಾ 1.5 ಕೆ.ಜಿ, ಸೂಪರ್ ಫಾಸ್ಪೆಟ್ 1.5 ಕೆ.ಜಿ, ಮ್ಯೂರಿಯೇಟ್ ಆಫ್ ಪೋಟ್ಯಾಶ್ 0.5 ಕೆ.ಜಿ ಮತ್ತು ಲಘು ಪೋಷಕಾಂಶಗಳು 50 ಗ್ರಾಂ., 6 ವರ್ಷದ ಗಿಡಕ್ಕೆ ಕೊಟ್ಟಿಗೆ/ತಿಪ್ಪೆ/ಎರೆಹುಳು ಗೊಬ್ಬರ 60 ಕೆ.ಜಿ, ಯೂರಿಯಾ 1.8 ಕೆ.ಜಿ, ಸೂಪರ್ ಫಾಸ್ಫೇಟ್ 1.8 ಕೆ.ಜಿ, ಮ್ಯೂರಿಯೇಟ್ ಆಫ್ ಪೋಟ್ಯಾಶ್ 0.6 ಕೆ.ಜಿ ಮತ್ತು ಲಘು ಪೋಷಕಾಂಶಗಳು 50 ಗ್ರಾಂ, 7 ವರ್ಷದ ಗಿಡಕ್ಕೆ ಕೊಟ್ಟಿಗೆ/ತಿಪ್ಪೆ/ಎರೆಹುಳು ಗೊಬ್ಬರ 70 ಕೆ.ಜಿ, ಯೂರಿಯಾ 2.1 ಕೆ.ಜಿ, ಸೂಪರ್ ಫಾಸ್ಫೇಟ್ 2.1 ಕೆ.ಜಿ, ಮ್ಯೂರಿಯೇಟ್ ಆಫ್ ಪೋಟ್ಯಾಶ್ 0.7 ಕೆ.ಜಿ ಮತ್ತು ಲಘು ಪೋಷಕಾಂಶಗಳು 50 ಗ್ರಾಂ., 8 ವರ್ಷದ ಗಿಡಕ್ಕೆ ಕೊಟ್ಟಿಗೆ/ತಿಪ್ಪೆ/ಎರೆಹುಳು ಗೊಬ್ಬರ 80 ಕೆ.ಜಿ, ಯೂರಿಯಾ 2.4 ಕೆ.ಜಿ, ಸೂಪರ್ ಫಾಸ್ಫೇಟ್ 2.4 ಕೆ.ಜಿ, ಮ್ಯೂರಿಯೇಟ್ ಆಫ್ ಪೋಟ್ಯಾಶ್ 0.8 ಕೆ.ಜಿ ಮತ್ತು ಲಘು ಪೋಷಕಾಂಶಗಳು 50 ಗ್ರಾಂ., 9 ವರ್ಷದ ಗಿಡಕ್ಕೆ ಕೊಟ್ಟಿಗೆ/ತಿಪ್ಪೆ/ಎರೆಹುಳು ಗೊಬ್ಬರ 90 ಕೆ.ಜಿ, ಯೂರಿಯಾ 2.7 ಕೆ.ಜಿ, ಸೂಪರ್ ಫಾಸ್ಫೇಟ್ 2.7 ಕೆ.ಜಿ, ಮ್ಯೂರಿಯೇಟ್ ಆಫ್ ಪೋಟ್ಯಾಶ್ 0.9 ಕೆ.ಜಿ ಮತ್ತು ಲಘು ಪೋಷಕಾಂಶಗಳು 50 ಗ್ರಾಂ., 10 ವರ್ಷದ ಗಿಡಕ್ಕೆ ಕೊಟ್ಟಿಗೆ/ತಿಪ್ಪೆ/ಎರೆಹುಳು ಗೊಬ್ಬರ 100 ಕೆ.ಜಿ, ಯೂರಿಯಾ 3.0 ಕೆ.ಜಿ, ಸೂಪರ್ ಫಾಸ್ಫೇಟ್ 3.0 ಕೆ.ಜಿ, ಮ್ಯೂರಿಯೇಟ್ ಆಫ್ ಪೋಟ್ಯಾಶ್ 1.0 ಕೆ.ಜಿ ಮತ್ತು ಲಘು ಪೋಷಕಾಂಶಗಳು 100 ಗ್ರಾಂ., 10 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಗಿಡಕ್ಕೆ ಕೊಟ್ಟಿಗೆ/ತಿಪ್ಪೆ/ಎರೆಹುಳು ಗೊಬ್ಬರ 100 ಕೆ.ಜಿ, ಯೂರಿಯಾ 3.0 ಕೆ.ಜಿ, ಸೂಪರ್ ಫಾಸ್ಫೇಟ್ 3.0 ಕೆ.ಜಿ, ಮ್ಯೂರಿಯೇಟ್ ಆಫ್ ಪೋಟ್ಯಾಶ್ 2.0 ಕೆ.ಜಿ ಮತ್ತು ಲಘು ಪೋಷಕಾಂಶಗಳು 100 ಗ್ರಾಂ. ಮಿಶ್ರಣ ಮಾಡಿ ಹಾಕಬೇಕು.
ಆಗಸ್ಟ್ ತಿಂಗಳ ವಿಶೇಷ ಕ್ರಮಗಳು:
ಆಗಸ್ಟ್ನಲ್ಲಿ ಮಳೆ ಬೀಳದಿದ್ದರೆ ನೀರಾವರಿಯನ್ನು ಮುಂದುವರಿಸಬೇಕು ಹಾಗೂ ತೋಟದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಗಿಡಗಳ ಬೇಋಉ ಭಾಗದ ಪ್ರತಿ ಗಿಡಕ್ಕೆ ಯೂರಿಯಾ 250 ಗ್ರಾಂ, ಸೂಪರ್ ಫಾಸ್ಪೇಟ್ 500 ಗ್ರಾಂ ಹಾಗೂ ಮ್ಯೂರಿಯೇಟ್ ಆಫ್ ಪೋಟ್ಯಾಶ್ 250 ಗ್ರಾಂ. ಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಬೇಕು. ಇದರಿಂದ ಹೂಕಾಯಿ ಉದುರುವಿಕೆ ಕಡಿಮೆಯಾಗುತ್ತದೆ ಹಾಗೂ ಗಿಡಗಳಿಗೆ ಉತ್ತಮ ಪೋಷಕಾಂಶ ದೊರೆಯುತ್ತದೆ.
ಆಗಸ್ಟ್ ತಿಂಗಳಲ್ಲಿ “ಮ್ಯಾಂಗೋ ಸ್ಪೆಷಲ್” ಲಘು ಪೋಷಕಾಂಶ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ. ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು. ಜೊತೆಗೆ ಸೋಪಿನ ದ್ರಾವಣ 5 ಮಿ.ಲೀ. ಮತ್ತು 2 ರಿಂದ 3 ಲಿಂಬೆ ಹಣ್ಣಿನ ರಸವನ್ನು ಪ್ರತಿ 20 ಲೀಟರಿಗೆ ನೀರಿಗೆ ಸೇರಿಸಿ ಸಿಂಪಡಿಸುವುದರಿಂದ ಗಿಡಗಳಿಗೆ ಪೆÇೀಷಕಾಂಶಗಳ ಪ್ರಮಾಣ ಸುಧಾರಿಸುತ್ತದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು (ಜಿ.ಪಂ.) ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್