ಮುಧೋಳದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರೌಡಿ ಪರೇಡ್
ಬಾಗಲಕೋಟೆ, 24 ಜುಲೈ (ಹಿ.ಸ.) ಆ್ಯಂಕರ್ : ಸಾರ್ವಜನಿಕರಲ್ಲಿ ಶಾಂತಿ, ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ವೃತ್ತ ಪೊಲೀಸ್ ಕಚೇರಿಯಲ್ಲಿ ರೌಡಿ ಪರೇಡ್ ನಡೆಸಲಾಯಿತು. ವೃತ್ತ ನಿರೀಕ್ಷಕರಾದ (ಸಿಪಿಐ) ಎಂ. ನಾಗರಡ್ಡಿ ಅವರ ನೇತೃತ್ವದಲ್ಲಿ ನಡೆದ ಈ ಪರ
ಪರೇಡ್


ಬಾಗಲಕೋಟೆ, 24 ಜುಲೈ (ಹಿ.ಸ.)

ಆ್ಯಂಕರ್ : ಸಾರ್ವಜನಿಕರಲ್ಲಿ ಶಾಂತಿ, ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ವೃತ್ತ ಪೊಲೀಸ್ ಕಚೇರಿಯಲ್ಲಿ ರೌಡಿ ಪರೇಡ್ ನಡೆಸಲಾಯಿತು.

ವೃತ್ತ ನಿರೀಕ್ಷಕರಾದ (ಸಿಪಿಐ) ಎಂ. ನಾಗರಡ್ಡಿ ಅವರ ನೇತೃತ್ವದಲ್ಲಿ ನಡೆದ ಈ ಪರೇಡ್ನಲ್ಲಿ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳನ್ನು ಹಾಜರುಪಡಿಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಅವರು, ಸಮಾಜದಲ್ಲಿ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ, ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

ಸಾರ್ವಜನಿಕರಲ್ಲಿ ಭಯ ಹಾಗೂ ಆತಂಕ ಸೃಷ್ಟಿಸುವ ಕೃತ್ಯಗಳು, ಬೆದರಿಕೆ, ದೌರ್ಜನ್ಯ, ಜೂಜಾಟ, ಮಾದಕ ವಸ್ತುಗಳ ಸಾಗಾಟ, ಅಕ್ರಮ ವಹಿವಾಟು ಸೇರಿದಂತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಾನೂನು ಪ್ರಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಪೊಲೀಸರು ಸಹಿಸುವುದಿಲ್ಲ. ಅಪರಾಧ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದ್ದು, ಸಮಾಜದ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ರೌಡಿಶೀಟರ್ಗಳು ಸಮಾಜದ ಮುಖ್ಯವಾಹಿನಿಗೆ ಮರಳುವಂತೆ ಹಾಗೂ ಉತ್ತಮ ನಾಗರಿಕರಾಗಿ ಬದುಕುವಂತೆ ಸಲಹೆ ನೀಡಿದ ಅಧಿಕಾರಿಗಳು, ಭವಿಷ್ಯದಲ್ಲಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪೊಲೀಸ್ ಇಲಾಖೆಯ ಈ ಕ್ರಮದಿಂದ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವ ಜೊತೆಗೆ ಅಪರಾಧ ಚಟುವಟಿಕೆಗಳಿಗೆ ತಡೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಪ್ರಕಾಶ ಮುರನಾಳ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande