
ವಿಜಯಪುರ, 24 ಜುಲೈ (ಹಿ.ಸ.):
ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ನೀರಿನ ಕೊರತೆ ಉಂಟಾಗುವ ಮುನ್ನವೇ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಶೀಘ್ರ ಆರಂಭಿಸಬೇಕು ಹಾಗೂ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಇಂಡಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಕ್ಷೇತ್ರದ ಜನತೆಗೆ ಸಂಬಂಧಿಸಿದ ಹಲವು ಮೂಲಭೂತ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಯಿತು.
ಪ್ರಮುಖವಾಗಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಕೆರೆಗಳಿಗೆ ನೀರು ಹರಿಸಿ ಅವುಗಳನ್ನು ತುಂಬಿಸುವ ಯೋಜನೆ, ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸುವ ಕಾಮಗಾರಿಗಳು ಹಾಗೂ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
ತಾಲೂಕಿನ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಸಮಸ್ಯೆ ಹೇಳಿಕೊಂಡು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅಧಿಕಾರಿಗಳು ಗ್ರಾಮ ಮಟ್ಟದಲ್ಲಿಯೇ ಸಮಸ್ಯೆಗಳನ್ನು ಗುರುತಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಅವರು ಸೂಚಿಸಿದರು.
ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೆರೆಗಳನ್ನು ತುಂಬಿಸುವ ಕಾರ್ಯವನ್ನು ವಿಳಂಬ ಮಾಡದೆ ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಿದರು. ಇದರಿಂದ ಕೃಷಿ ಚಟುವಟಿಕೆಗಳಿಗೆ ಮತ್ತು ಗ್ರಾಮೀಣ ಪ್ರದೇಶದ ನೀರಿನ ಅಗತ್ಯಗಳಿಗೆ ಸಹ ನೆರವಾಗಲಿದೆ ಎಂದು ತಿಳಿಸಿದರು.
ಇದಲ್ಲದೆ, ಕ್ಷೇತ್ರದ ವಿವಿಧ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಆರಂಭಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸೇವೆ ಸಲ್ಲಿಸುವುದು ಅಧಿಕಾರಿಗಳ ಮೊದಲ ಕರ್ತವ್ಯವಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹದೇವಪ್ಪ ಏವೂರ, ಪೌರಾಡಳಿತ ಇಲಾಖೆಯ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗಾರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಇಲಾಖಾವಾರು ಪ್ರಗತಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಸಭೆಯ ಅಂತ್ಯದಲ್ಲಿ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande