
ಬಳ್ಳಾರಿ, 24 ಜುಲೈ (ಹಿ.ಸ.)
ಆ್ಯಂಕರ್ : ಬಳ್ಳಾರಿಯ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸುವರ್ಣ ಸಂಭ್ರಮದ ಅಂಗವಾಗಿ ‘ಬಸ್ತಿ – ಅರ್ಧ ಚಿಕಿತ್ಸೆಯೇ ಅಥವಾ ಪೂರ್ಣ ಚಿಕಿತ್ಸೆಯೇ?’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಶೈಕ್ಷಣಿಕ ಸಂವಾದ - ಸಂಶೋಧನಾ ಚರ್ಚೆ ಶುಕ್ರವಾರ ನಡೆಯಿತು.
ರಾಜ್ಯದ ವಿವಿಧ 25 ಆಯುರ್ವೇದ ಮಹಾವಿದ್ಯಾಲಯಗಳಿಂದ ಆಗಮಿಸಿದ್ದ ಪಂಚಕರ್ಮ ಸ್ನಾತಕೋತ್ತರ ವಿದ್ಯಾರ್ಥಿಗಳು, ಆಯುರ್ವೇದದ ಮೂಲ ಸಿದ್ಧಾಂತಗಳು ಹಾಗೂ ಆಧುನಿಕ ವೈಜ್ಞಾನಿಕ ದೃಷ್ಟಿಕೋನಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ವೈಚಾರಿಕ್ ನಂಬಿಕೆ ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಸಂತೋಷ್ ಎಲ್. ಯಡಹಳ್ಳಿ ಅವರು, ‘ಆಯುರ್ವೇದದ ಮೂಲತತ್ವಗಳ ಕುರಿತು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಶೈಕ್ಷಣಿಕ ಸಂವಾದವನ್ನು ಆಯೋಜಿಸಲಾಗಿದೆ,’ ಎಂದು ವಿಷಯದ ಮಹತ್ವ ವಿವರಿಸಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರಾಜಶೇಖರ್ ಎಸ್. ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ, ಇಂಥಹಾ ಚರ್ಚಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವಿಷಯದ ಆಳವಾದ ಅರಿವು, ಆತ್ಮವಿಶ್ವಾಸ ಮತ್ತು ವೈಜ್ಞಾನಿಕ ಚರ್ಚೆಯ ಸಂಸ್ಕøತಿಯನ್ನು ಬೆಳೆಸುತ್ತವೆ. ಕಾಲೇಜಿನ ಸುವರ್ಣ ಮಹೋತ್ಸವದ ಭಾಗವಾಗಿ ನಡೆದ ಈ ಕಾರ್ಯಕ್ರಮವು ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳ ನಡುವೆ ಶೈಕ್ಷಣಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗಳಿಸಿದೆ ಎಂದರು.
ಸ್ಪರ್ಧೆಯ ವಿಜೇತರು
ಸಂವಾದದ ತೀರ್ಪುಗಾರರಾಗಿ ಡಾ. ವಿನಯಕುಮಾರ್ ಹಾಗೂ ಡಾ. ಅಶ್ವಿನ್ ಕುಮಾರ್ ಕಾರ್ಯನಿರ್ವಹಿಸಿದರು.
ಪ್ರಥಮ ಸ್ಥಾನ: ‘ಮೇಧಾ' ತಂಡ (ಮಾರ್ಗದರ್ಶಕರು: ಡಾ. ರಶ್ಮಿ). ದ್ವಿತೀಯ ಸ್ಥಾನ: ‘ವಿವೇಕ' ತಂಡ (ಮಾರ್ಗದರ್ಶಕರು: ಡಾ. ಜೈರಾಜ್ ಬಸರಿಗಿಡದ).
ಸಂವಾದದ ರಾಜ್ಯಮಟ್ಟದ ಕಾರ್ಯದರ್ಶಿಯಾಗಿ ಡಾ. ಸಂತೋಷ್ ಎಲ್. ಯಡಹಳ್ಳಿ ಹಾಗೂ ಸಹ-ಕಾರ್ಯದರ್ಶಿಯಾಗಿ ಡಾ. ಶಿಲ್ಪಶ್ರೀ ಇಡೀ ಸಂವಾದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಡಾ. ನಂದಿನಿ ಹಿರೇಮಠ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹ-ಕಾರ್ಯದರ್ಶಿ ಡಾ. ವಿಜಯ ಮಹಾಂತೇಶ್ ಹೂಗಾರ್ ವಂದಿಸಿದರು.
ರಾಜ್ಯದ ವಿವಿಧ ಆಯುರ್ವೇದ ಕಾಲೇಜುಗಳ ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಆಯುರ್ವೇದ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್