
ಮೈಸೂರು, 24 ಜುಲೈ (ಹಿ.ಸ.):
ಆ್ಯಂಕರ್:
ಮುಂಬರುವ ಸಚಿವ ಸಂಪುಟ ವಿಸ್ತರಣೆ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ಹಿರಿಯ ಶಾಸಕ ಕೃಷ್ಣಮೂರ್ತಿ ತಮ್ಮ ಸಚಿವ ಸ್ಥಾನದ ಆಕಾಂಕ್ಷೆಯನ್ನು ಬಹಿರಂಗವಾಗಿ ತೊಡಿಕೊಂಡಿದ್ದಾರೆ.
ಕುಟುಂಬ ಸಮೇತ ಮೈಸೂರಿನ ಚಾಮುಂಡಿ ತಾಯಿ ದರ್ಶನ ಪಡೆದು ಮಾಧ್ಯಮಗಳಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರೂ, ಈವರೆಗೂ ಜಿಲ್ಲೆಗೆ ಸೂಕ್ತ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಬೇಸರ ವ್ಯಕ್ತಪಡಿಸಿದರು. ತಾವು 1994, 1999 ಹಾಗೂ ಪ್ರಸ್ತುತ 2023ರಲ್ಲೂ ಸೇರಿದಂತೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದೇನೆ ಹೀಗಾಗಿ ಈ ಬಾರಿ ನನಗೆ ಸಚಿವ ಸ್ಥಾನ ಸಿಕ್ಕುವ ಅವಕಾಶ ಇದೆ ಎಂದಿದ್ದಾರೆ.
ಪಕ್ಷದ ವರಿಷ್ಠರು ಹಾಗೂ ಹೈಕಮಾಂಡ್ ಈ ಬಾರಿ ತಮ್ಮ ಹಿರಿಯತನ ಹಾಗೂ ಸೇವಾ ಅನುಭವವನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುತ್ತಾರೆ ಎಂಬ ದೃಢ ವಿಶ್ವಾಸವಿದೆ ಎಂದು ಅವರು ತಿಳಿಸಿದರು. ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದ ಶಾಸಕರು, ಕ್ಷೇತ್ರದ ಜನಪರ ಸೇವೆಗೆ ರಾಜ್ಯ ಮಟ್ಟದಲ್ಲಿ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII