
ಬೆಂಗಳೂರು, 24 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದ ಪಡಿತರ ಚೀಟಿದಾರರಲ್ಲಿ ಕಳೆದ ಕೆಲವು ದಿನಗಳಿಂದ ಮನೆ ಮಾಡಿದ್ದ ಆತಂಕ ಹಾಗೂ ವಾಸಿಯಾಗದ ಗೊಂದಲಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳಿಗೆ ಮೂರು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಇದುವರೆಗೆ ನೀಡಲಾಗುತ್ತಿದ್ದ ಹೆಚ್ಚುವರಿ ಅಕ್ಕಿಯ ಹಣ ಅಥವಾ ಪಡಿತರ ವ್ಯವಸ್ಥೆಯಲ್ಲಿ ಪರಿಷ್ಕರಣೆ ಮಾಡಿ, ಇನ್ಮುಂದೆ ಪೌಷ್ಟಿಕಾಂಶಯುಕ್ತ ಅಗತ್ಯ ದಿನಸಿ ಸಾಮಗ್ರಿಗಳನ್ನು ಒಳಗೊಂಡ ನೂತನ 'ಇಂದಿರಾ ಆಹಾರ ಕಿಟ್' ಅನ್ನು ವಿತರಿಸಲು ಸರ್ಕಾರ ತೀರ್ಮಾನಿಸಿದೆ. ಈ ವಿಶೇಷ ಕಿಟ್ನಲ್ಲಿ ಅಡುಗೆ ಎಣ್ಣೆ, ತೊಗರಿ ಬೇಳೆ, ಹೆಸರು ಬೇಳೆ, ಸಕ್ಕರೆ ಹಾಗೂ ಅಯೋಡೀಕರಿಸಿದ ಉಪ್ಪು ಲಭ್ಯವಿರಲಿದೆ. ರಾಜ್ಯದ ಅಂದಾಜು 1.26 ಕೋಟಿ ಬಿಪಿಎಲ್ ಕುಟುಂಬಗಳಿಗೆ ಮನೆಯ ಸದಸ್ಯರ ಸಂಖ್ಯೆಗೆ ತಕ್ಕಂತೆ (ಅರ್ಧ ಕೆಜಿಯಿಂದ 1.5 ಕೆಜಿ ವರೆಗೆ) ಈ ಕಿಟ್ ವಿತರಿಸಲಾಗುವುದು. ಅಲ್ಲದೆ, ಸಾರ್ವಜನಿಕರ ಸಮಯದ ಅನುಕೂಲಕ್ಕಾಗಿ ಇನ್ಮುಂದೆ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಬಿಪಿಎಲ್ ಕಾರ್ಡ್ಗಳು ರದ್ದಾಗುತ್ತಿವೆ ಎಂಬ ಸಾರ್ವಜನಿಕರ ವದಂತಿಗಳಿಗೆ ಅಂತ್ಯಹಾಡಿದ ಸಚಿವರು, ಯಾವುದೇ ಕಾರ್ಡ್ಗಳನ್ನು ಸಾರಾಸಗಟಾಗಿ ರದ್ದುಪಡಿಸಿಲ್ಲ ಎಂದಿದ್ದಾರೆ. ನಿಯಮಬಾಹಿರವಾಗಿ ಸೌಲಭ್ಯ ಪಡೆಯುತ್ತಿದ್ದ 4,32,295 ಕಾರ್ಡ್ಗಳನ್ನು ಮಾತ್ರ ನಿಯಮಾನುಸಾರ ಎಪಿಎಲ್ಗೆ ವರ್ಗಾಯಿಸಲಾಗಿದೆ. ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ, ತಾಂತ್ರಿಕ ದೋಷಗಳಿಂದಾಗಿ ತಪ್ಪಾಗಿ ಎಪಿಎಲ್ಗೆ ಸೇರ್ಪಡೆಗೊಂಡಿರುವವರು ಸ್ಥಳೀಯ ಆಹಾರ ಇಲಾಖೆಗೆ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಿದ ಕೇವಲ 24 ಗಂಟೆಯೊಳಗೆ ಮರುಪರಿಶೀಲಿಸಿ ಬಿಪಿಎಲ್ ಸೌಲಭ್ಯ ಮರಳಿ ಕಲ್ಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೆ, ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿರುವ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆಗೊಂಡಿರುವವರು ಸೇರಿದಂತೆ ಎಲ್ಲಾ ಸಾಮಾನ್ಯ ಎಪಿಎಲ್ ಕಾರ್ಡುದಾರರಿಗೂ ಮರಳಿ ಅಕ್ಕಿ ವಿತರಿಸುವ ಕುರಿತು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII