
ಬಾಗಲಕೋಟೆ, 24 ಜುಲೈ (ಹಿ.ಸ.):
ಆ್ಯಂಕರ್ : ಬಾಗಲಕೋಟೆ ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ, ಸಾರ್ವಜನಿಕರಲ್ಲಿ ಇನ್ನೂ ವ್ಯಾಪಕವಾಗಿ ಬಳಕೆಯಾಗುತ್ತಿರುವ ಪ್ರಾಣಹಾನಿಕರ 'ಮಾವಾ' ಸೇವನೆಯ ಸಮಸ್ಯೆ ಅವರ ಗಮನಕ್ಕೆ ಬಂದಿತು.
ಪೊಲೀಸ್ ಇಲಾಖೆ ನಿರಂತರ ದಾಳಿ ನಡೆಸಿ ಮಾವಾ ಹಾಗೂ ಇತರೆ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳುತ್ತಿದ್ದರೂ, ಅವು ಜನಸಾಮಾನ್ಯರ ಕೈ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಪರಿಶೀಲನೆ ವೇಳೆ ಕೆಲಸ ಮಾಡುತ್ತಿದ್ದ ಒಬ್ಬ ಕಾರ್ಮಿಕನು ಮಾವಾ ಸೇವಿಸುತ್ತಿರುವುದನ್ನು ಗಮನಿಸಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಆತನನ್ನು ಕರೆದು, ಮಾವಾ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿ ಹೇಳಿದರು. ಬಾಯಿ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗಳಿಗೆ ಇಂತಹ ತಂಬಾಕು ಉತ್ಪನ್ನಗಳು ಕಾರಣವಾಗುತ್ತವೆ. ಆದ್ದರಿಂದ ತಕ್ಷಣವೇ ಮಾವಾ ಸೇವನೆ ನಿಲ್ಲಿಸಿ ಆರೋಗ್ಯಯುತ ಜೀವನ ನಡೆಸುವಂತೆ ಅವರು ಸಲಹೆ ನೀಡಿದರು.
ದುಡಿದು ಬದುಕುವ ಕಾರ್ಮಿಕರ ಆರೋಗ್ಯವೇ ಅವರ ದೊಡ್ಡ ಸಂಪತ್ತು. ಕ್ಷಣಿಕ ಅಭ್ಯಾಸಕ್ಕಾಗಿ ಜೀವಕ್ಕೆ ಅಪಾಯ ತರುವ ಮಾವಾ ಸೇವಿಸುವ ಬದಲು ಉತ್ತಮ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಉಪ ಲೋಕಾಯುಕ್ತರ ಈ ಕಿವಿಮಾತಿಗೆ ಕಾರ್ಮಿಕ ಸಹ ಸಕಾರಾತ್ಮಕವಾಗಿ ಸ್ಪಂದಿಸಿದನು.
ಜಿಲ್ಲೆಯಲ್ಲಿ ಪೊಲೀಸರು ಆಗಾಗ ಮಾವಾ ಮಾರಾಟಗಾರರ ವಿರುದ್ಧ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ ಇಂತಹ ವಸ್ತುಗಳು ಇನ್ನೂ ಸುಲಭವಾಗಿ ಲಭ್ಯವಾಗುತ್ತಿರುವುದು ಕಾನೂನು ಜಾರಿಯ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನೂ ಎತ್ತಿ ತೋರಿಸಿದೆ.
ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಅಕ್ರಮ ಮಾರಾಟದ ವಿರುದ್ಧ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಿಷೇಧಿತ ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂಬ ಸಂದೇಶವನ್ನು ಉಪ ಲೋಕಾಯುಕ್ತರ ಈ ನಡೆ ಮತ್ತೊಮ್ಮೆ ಸಾರಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande