
ಬೆಂಗಳೂರು, 24 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ಐತಿಹಾಸಿಕ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಭೇಟಿ ನೀಡಿ, ಸಂಸ್ಥೆಯ ಪ್ರಸ್ತುತ ಕಾರ್ಯಚಟುವಟಿಕೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.
ತರಬೇತಿ ಶಾಲೆಯ ಆವರಣವನ್ನು ವೀಕ್ಷಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿಮಾನ ಚಾಲನಾ ತರಬೇತಿಯ ಗುಣಮಟ್ಟ, ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ಪಡೆದರು. ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಪ್ರಮುಖ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಎಂ.ಎನ್. ಅನುಚೇತ್ ಹಾಗೂ ನಿರ್ದೇಶಕ ಬಸವರಾಜ್ ಉಪಸ್ಥಿತರಿದ್ದರು.
1949ರಲ್ಲಿ ಮೈಸೂರು ಮಹಾರಾಜರ ಕೊಡುಗೆಯ ಜಮೀನಿನಲ್ಲಿ ಆರಂಭಗೊಂಡ ಈ ಸಂಸ್ಥೆಯು ಹಲವು ದಶಕಗಳ ಕಾಲ ದೇಶಕ್ಕೆ ನೂರಾರು ಪೈಲಟ್ಗಳನ್ನು ನೀಡಿದೆ. ಇತ್ತೀಚೆಗೆ ಡಿಜಿಸಿಎ ಸಂಸ್ಥೆಯು 2031ರವರೆಗೆ ಐದು ವರ್ಷಗಳ ಕಾಲ ಮರು ಪರವಾನಗಿ ನೀಡಿರುವುದರಿಂದ, ತರಬೇತಿ ಶಾಲೆಯ ಸ್ಥಳಾಂತರದ ವದಂತಿಗಳಿಗೆ ತೆರೆಬಿದ್ದಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII