





ಬಳ್ಳಾರಿ, 24 ಜುಲೈ (ಹಿ.ಸ.)
ಆ್ಯಂಕರ್ : ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಕಳವಳಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿದ್ಧಲಿಂಗ ಪ್ರಭು ಅವರು ತಿಳಿಸಿದ್ದಾರೆ.
ರೀಡ್ಸ್ ಸಂಸ್ಥೆ, ಮಕ್ಕಳ ವಿಶೇಷ ಪೊಲೀಸ್ ಘಟಕ ಬಳ್ಳಾರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಇವರ ಸಂಯುಕ್ತಾಶ್ರಯದಲ್ಲಿ ‘ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯ್ದೆ, ಸೈಬರ್ ಕ್ರೆö, ಮಾದಕ ದ್ರವ್ಯ ಮುಕ್ತ, ಮಕ್ಕಳ ಮೇಲಿನ ದೌರ್ಜನ್ಯ ತಡೆ’ ಕುರಿತು ರಾಘವ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದುವೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಅಗತ್ಯ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದರಿಂದ ಅವರ ಆರೋಗ್ಯ ಹಾಗೂ ವೈವಾಹಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.
ಪೋಕ್ಸೋ ವಿಶೇಷ ನ್ಯಾಯಾಲಯವಿದ್ದರೂ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ಪ್ರಮಾಣ ಹೆಚ್ಚಾಗಬೇಕಿದೆ. ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರಿಗೆ ಶಿಕ್ಷೆಯಾದಾಗ ಮಾತ್ರ ಇಡೀ ಸಮಾಜಕ್ಕೆ ಸರಿಯಾದ ಸಂದೇಶ ರವಾನೆಯಾಗುತ್ತದೆ. ಪೋಕ್ಸೋ ಪ್ರಕರಣಗಳಲ್ಲಿ ಪೊಲೀಸ್ ಮತ್ತು ನ್ಯಾಯಾಂಗದ ಜೊತೆಗೆ ಸಮಾಜ ಹಾಗೂ ವಿದ್ಯಾರ್ಥಿಗಳ ಪಾತ್ರವೂ ಪ್ರಮುಖವಾಗಿದೆ ಎಂದರು.
ಹೆಚ್ಚುತ್ತಿರುವ ಬ್ಯಾಂಕಿಂಗ್ ವಂಚನೆಗಳು, ಉದ್ಯೋಗದ ಹೆಸರಿನಲ್ಲಿ ವಂಚನೆ ಹಾಗೂ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಕುರಿತು ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್ ಖಾತೆ ತೆರೆಯುವುದು ಹಾಗೂ ಯುವತಿಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆ ಹಾಕುವ ಪ್ರಕರಣಗಳ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅತ್ಯಗತ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಅವರು, ಬಾಲ್ಯ ವಿವಾಹವು ಹೆಣ್ಣುಮಕ್ಕಳ ಜೀವನ ಮತ್ತು ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತದೆ. ಇಡೀ ಜೀವನವನ್ನು ಗಂಡ, ಮಕ್ಕಳ ಸೇವೆಯಲ್ಲೇ ಕಳೆದುಹೋಗುವಂತೆ ಮಾಡುವ ಈ ಪದ್ಧತಿಯನ್ನು ತಡೆಯಲೇಬೇಕಾಗಿದೆ ಎಂದು ಹೇಳಿದರು.
ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಹೆಣ್ಣುಮಕ್ಕಳು ಅಪರಾಧಿಯಾಗುವುದಿಲ್ಲ, ಬದಲಿಗೆ ಸಂತ್ರಸ್ತರಾಗುತ್ತಾರೆ. ಮದುವೆ ಮಾಡಿ ಕೊಟ್ಟ ಪೋಷಕರು, ಗಂಡನ ಮನೆಯವರು ಹಾಗೂ ಮದುವೆಗೆ ಸಹಕರಿಸಿದವರೇ ಕಾನೂನಿನ ಮುಂದೆ ಅಪರಾಧಿಗಳಾಗುತ್ತಾರೆ ಎಂದರು.
ಮಕ್ಕಳಿಗೆ ಕನಸು ಕಾಣಲು, ಓದಲು ಮತ್ತು ಸಾಧನೆ ಮಾಡಲು ಅವಕಾಶ ನೀಡಿ. ಆಗ ಮಾತ್ರ ಪೋಷಕರ ಹೆಸರು ಎತ್ತರಕ್ಕೆ ಬೆಳೆಯುತ್ತದೆ. ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡುಬ0ದರೆ ತಕ್ಷಣವೇ ಸಂಬಂಧಪಟ್ಟ ಇಲಾಖೆಗಳಿಗೆ, ಪೊಲೀಸ್ ಹೆಲ್ಪ್ಲೈನ್ ಅಥವಾ 1098 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕರೆ ಮಾಡುವವರ ಮಾಹಿತಿ ಮತ್ತು ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಎಎಸ್ಪಿ ನವೀನ್ ಕುಮಾರ್, ಬಳ್ಳಾರಿ ನಗರ ಡಿವೈಎಸ್ಪಿ ಗೋವಿಂದರಾಜುಲು, ರೀಡ್ಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತ್ರಿವೇಣಿ ಪತ್ತಾರ್ ಸೇರಿದಂತೆ ಮಕ್ಕಳು, ಯುವಕ-ಯುವತಿಯರು ಮತ್ತು ಸ್ವ-ಸಹಾಯ ಸಂಘದ ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್