
ಬೆಂಗಳೂರು, 24 ಜುಲೈ (ಹಿ.ಸ.):
ಆ್ಯಂಕರ್:
ಬಿಜೆಪಿ ಶಾಸಕರ ಮೇಲಿನ ಮೊಟ್ಟೆ ಎಸೆತ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸತ್ಯಾಂಶಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಲ, 'ಕೊತ್ವಾಲ್ ಪ್ರದೇಶ ಕಾಂಗ್ರೆಸ್ ಕಮಿಟಿ' ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರೌಡಿಗಳು ಮತ್ತು ಗೂಂಡಾಗಳ ಅಡ್ಡೆಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿರುವ ಅವರು, ಬಿಜೆಪಿ ಶಾಸಕ ಬಿ.ಪಿ. ಹರೀಶ್ ಹಾಗೂ ಪಕ್ಷದ ನಾಯಕರ ಮೇಲೆ ನಡೆದ ಮೊಟ್ಟೆ ಎಸೆತ ಮತ್ತು ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕನ ಪುತ್ರನ ಬೆಂಬಲಿಗರು ಹಾಗೂ ಕಾರ್ಯಕರ್ತರ ಪಾತ್ರವಿದೆ ಎಂದು ದೂರಿದ್ದಾರೆ.
ಕೆಪಿಸಿಸಿ ಕಚೇರಿ ಸಮೀಪದ ಅಂಗಡಿಯಿಂದ ಮೊಟ್ಟೆಗಳನ್ನು ಖರೀದಿಸಿ ಪೂರ್ವನಿಯೋಜಿತವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿರುವ ಅಶೋಕ್, ಸರ್ಕಾರಿ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಿರುವ ಹಾಗೂ ವಿವಿಧ ಠಾಣೆಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳೇ ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿರೋಧ ಪಕ್ಷದ ಜನಪ್ರತಿನಿಧಿಗಳ ಮೇಲೆಯೇ ಗೂಂಡಾಗಳನ್ನು ಬಳಸಿ ಹಲ್ಲೆ ನಡೆಸುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆಯೇ ಎಂದು ಪ್ರಶ್ನಿಸಿರುವ ಅವರು, ಅಧಿಕಾರದ ದುರುಪಯೋಗದಿಂದ ರಾಜ್ಯದಲ್ಲಿ ಗೂಂಡಾ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು.
ಹಲ್ಲೆ ಪ್ರಕರಣದ ಹಿಂದೆ ಇರುವ ಪ್ರಭಾವಿ ಶಾಸಕನ ಪುತ್ರ ಹಾಗೂ ಇದರ ಸೂತ್ರಧಾರರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿರುವ ಅಶೋಕ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿಯ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.