
ಬೆಂಗಳೂರು, 24 ಜುಲೈ (ಹಿ.ಸ.):
ಆ್ಯಂಕರ್:
ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಪ್ರತಿಭಾವಂತ ಹಾಗೂ ಚಿಂತಕರನ್ನು ಒಂದೇ ವೇದಿಕೆಗೆ ಕರೆತರುವ ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಉತ್ಸವವಾದ 29ನೇ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ' (ಬಿಟಿಎಸ್ 2026) ಗೆ ರಾಜ್ಯ ಸರ್ಕಾರ ಅಧಿಕೃತ ಚಾಲನೆ ಸಿಕ್ಕಿದೆ. 'ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ' ಎಂಬ ಪ್ರಮುಖ ಧ್ಯೇಯವಾಕ್ಯದಡಿ ಈ ಬಾರಿಯ ಶೃಂಗಸಭೆಯು ನವೆಂಬರ್ 17ರಿಂದ 19ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಅದ್ದೂರಿಯಾಗಿ ನಡೆಯಲಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಮಾಹಿತಿ ನೀಡಿ, ಮೂರು ದಶಕಗಳ ಯಶಸ್ವಿ ಪರಂಪರೆ ಹೊಂದಿರುವ ಈ ಶೃಂಗಸಭೆಯಲ್ಲಿ 75ಕ್ಕೂ ಹೆಚ್ಚು ದೇಶಗಳು ಹಾಗೂ ಭಾರತದ 30ಕ್ಕೂ ಹೆಚ್ಚು ರಾಜ್ಯಗಳಿಂದ 1,800ಕ್ಕೂ ಹೆಚ್ಚು ಪ್ರದರ್ಶಕರು, 25,000ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು 60,000ಕ್ಕೂ ಹೆಚ್ಚು ಉದ್ಯಮ ಸಂದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಕೃತಕ ಬುದ್ಧಿಮತ್ತೆ, ಡೀಪ್ಟೆಕ್, ಸೆಮಿಕಂಡಕ್ಟರ್ಗಳು, ಜೈವಿಕ ತಂತ್ರಜ್ಞಾನ, ಸ್ಟಾರ್ಟ್ಅಪ್ಗಳು ಸೇರಿದಂತೆ ಮುಂಚೂಣಿ ತಂತ್ರಜ್ಞಾನ ಕ್ಷೇತ್ರಗಳ ದಿಗ್ಗಜರು ಇಲ್ಲಿ ಒಂದಗೂಡಲಿದ್ದಾರೆ.
ಈ ಬಾರಿಯ ಸಮ್ಮೇಳನದಲ್ಲಿ ಜರ್ಮನಿಯ ಸಹಯೋಗದೊಂದಿಗೆ 'ಎಂಬೆಡೆಡ್ ವರ್ಲ್ಡ್ ಇಂಡಿಯಾ'ದ ಮೊದಲ ಆವೃತ್ತಿ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡುವ 'ಚೇಂಜ್ನೌ'ನ ಭಾರತ ಆವೃತ್ತಿ ವಿಶೇಷ ಆಕರ್ಷಣೆಯಾಗಲಿವೆ. ಜಾಗತಿಕ ಸಹಭಾಗಿತ್ವ ಮತ್ತು ನಾವೀನ್ಯತೆಗೆ ಕರ್ನಾಟಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಬೃಹತ್ ಉತ್ಸವ ಮಹತ್ವದ ಹೆಜ್ಜೆಯಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII