
ಆನೇಕಲ್, 24 ಜುಲೈ (ಹಿ.ಸ.):
ಆ್ಯಂಕರ್:
ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಹಾಸಿಗೆ ಗೋಡೌನ್ನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡು, ಕಟ್ಟಡ ಸಂಪೂರ್ಣವಾಗಿ ಸುಟ್ಟುಕರಕಲಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿದೆ.
ದೊಡ್ಡಕಮ್ಮನಹಳ್ಳಿಯಲ್ಲಿ ನೆಲಮಹಡಿಯಲ್ಲಿ ಹಾಸಿಗೆ ಅಂಗಡಿಗಳನ್ನು ತೆರೆಯಲಾಗಿದ್ದು, ಮೇಲಿನ ಮಹಡಿಯಲ್ಲಿ ಗೋಡೌನ್ ಮಾಡಿಕೊಳ್ಳಲಾಗಿತ್ತು. ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಡುಗೆ ಮಾಡಲು ಸಿಲಿಂಡರ್ ಇಡಲಾಗಿತ್ತು. ಈ ವೇಳೆ ಏಕಾಏಕಿ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಜ್ವಾಲೆ ವೇಗವಾಗಿ ಹರಡುತ್ತಿದ್ದಂತೆ ಎಚ್ಚೆತ್ತ ಕೆಲಸಗಾರರು ತಕ್ಷಣವೇ ಕಟ್ಟಡದಿಂದ ಹೊರಗೋಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಈ ಭೀಕರ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII