ನಾಯಕತ್ವ, ಕ್ರೀಡಾ ಮನೋಭಾವ, ಸಾಮಾಜಿಕ ಹೊಣೆಗಾರಿಕೆ ಬೆಳೆಸಲು ಮಹತ್ವದ ಹೆಜ್ಜೆ: ಡಿಸಿ
ಗದಗ, 24 ಜುಲೈ (ಹಿ.ಸ.) ಆ್ಯಂಕರ್:- ಯುವಶಕ್ತಿಯನ್ನು ದೇಶದ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಹಾಗೂ ಯುವಜನರಲ್ಲಿ ನಾಯಕತ್ವ ಗುಣ, ಶಿಸ್ತು, ಸಾಮಾಜಿಕ ಹೊಣೆಗಾರಿಕೆ, ಕ್ರೀಡಾ ಮನೋಭಾವ ಮತ್ತು ಸಮುದಾಯ ಸೇವೆಯ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ‘ಭಾರತ್ ಜೋಡೋ
ಫೋಟೋ


ಗದಗ, 24 ಜುಲೈ (ಹಿ.ಸ.)

ಆ್ಯಂಕರ್:- ಯುವಶಕ್ತಿಯನ್ನು ದೇಶದ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಹಾಗೂ ಯುವಜನರಲ್ಲಿ ನಾಯಕತ್ವ ಗುಣ, ಶಿಸ್ತು, ಸಾಮಾಜಿಕ ಹೊಣೆಗಾರಿಕೆ, ಕ್ರೀಡಾ ಮನೋಭಾವ ಮತ್ತು ಸಮುದಾಯ ಸೇವೆಯ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಸಂಬಂಧಿಸಿದ ಪೂರ್ವಭಾವಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಶಕ್ತಿಯು ದೇಶದ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿದೆ. ಯುವಜನರಲ್ಲಿರುವ ಪ್ರತಿಭೆ, ಸಾಮರ್ಥ್ಯ, ಉತ್ಸಾಹ ಹಾಗೂ ಸೃಜನಶೀಲತೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯುವ ಸಂಘಗಳು ಯುವಕರಿಗೆ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳಲು ಪರಿಣಾಮಕಾರಿ ವೇದಿಕೆಯಾಗಬೇಕು ಎಂದು ಹೇಳಿದರು.

ಇಂದಿನ ಯುವಜನತೆ ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತವಾಗದೆ, ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯವಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಯುವಕರನ್ನು ಸಂಘಟಿಸಿ, ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ ಕ್ರೀಡೆ, ಕೌಶಲ್ಯಾಭಿವೃದ್ಧಿ, ಪರಿಸರ ಸಂರಕ್ಷಣೆ, ಸಮುದಾಯ ಅಭಿವೃದ್ಧಿ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಭಾರತ್ ಜೋಡೋ ಯುವ ಸಂಘಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಾರದರ್ಶಕವಾಗಿ ಸಂಘಗಳ ರಚನೆಗೆ ಸೂಚನೆ

‘ಭಾರತ್ ಜೋಡೋ ಯುವ ಸಂಘ’ಗಳ ರಚನೆ ಪ್ರಕ್ರಿಯೆಯು ಸಂಪೂರ್ಣ ನಿಯಮಾನುಸಾರ, ಪಾರದರ್ಶಕ ಹಾಗೂ ಯಶಸ್ವಿಯಾಗಿ ನಡೆಯಬೇಕು. ಯುವಜನರಿಗೆ ಕ್ರೀಡೆ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಆದ್ದರಿಂದ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಂಘಗಳ ರಚನೆ, ಸದಸ್ಯರ ನೋಂದಣಿ ಹಾಗೂ ಇತರ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಯುವ ಸಂಘಗಳ ಮೂಲಕ ಯುವಜನರಲ್ಲಿ ದೇಶಭಕ್ತಿ, ಸಾಮಾಜಿಕ ಜವಾಬ್ದಾರಿ, ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಸಾಮಾಜಿಕ ಸಾಮರಸ್ಯದ ಭಾವನೆಗಳನ್ನು ಬೆಳೆಸಬೇಕು. ವಿವಿಧ ಸಮುದಾಯಗಳ ಯುವಕರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಹಾಗೂ ಸೌಹಾರ್ದತೆಯನ್ನು ಬಲಪಡಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಪ್ರತಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ

ಪ್ರತಿ 4,000 ಜನಸಂಖ್ಯೆಗೆ ಒಂದರಂತೆ ‘ಭಾರತ್ ಜೋಡೋ ಯುವ ಸಂಘ’ವನ್ನು ರಚಿಸಲು ಉದ್ದೇಶಿಸಲಾಗಿದೆ. 16ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಈ ಸಂಘದ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಪ್ರತಿ ಸಂಘದಲ್ಲಿ 15 ಜನರ ಕಾರ್ಯಕಾರಿ ಸಮಿತಿ ಇರಲಿದೆ. ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಲಾಟರಿ ಅಥವಾ ಚೀಟಿ ಎತ್ತುವ ಪದ್ಧತಿಯ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಕಾರ್ಯಕಾರಿ ಸಮಿತಿಯಲ್ಲಿ ವಿವಿಧ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಿಂದ ಮೂವರು ಸದಸ್ಯರು, ಅವರಲ್ಲಿ ಒಬ್ಬರು ಮಹಿಳೆ; ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಂದ ನಾಲ್ವರು ಸದಸ್ಯರು, ಅವರಲ್ಲಿ ಒಬ್ಬರು ಮಹಿಳೆ; ಸಾಮಾನ್ಯ ವರ್ಗದಿಂದ ಎಂಟು ಸದಸ್ಯರು, ಅವರಲ್ಲಿ ಮೂವರು ಮಹಿಳೆಯರು ಇರಲಿದ್ದಾರೆ.

ಈ ಮೂಲಕ ಯುವ ಸಂಘಗಳ ಕಾರ್ಯಕಾರಿ ಸಮಿತಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸದಸ್ಯರು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾವರ್ತನೆಯಾಗಲು ಅವಕಾಶವಿರುವುದಿಲ್ಲ. ಸಂಘದ ಕಾರ್ಯಕಾರಿ ಸಮಿತಿಯು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳನ್ನು ಸಮಾನವಾಗಿ ಪ್ರತಿನಿಧಿಸುವ ರೀತಿಯಲ್ಲಿ ರಚನೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

10 ಸಾವಿರ ಯುವ ಸಂಘಗಳ ಸ್ಥಾಪನೆ ಗುರಿ

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಮಾತನಾಡಿ, ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯಾದ್ಯಂತ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 6,000 ಹಾಗೂ ನಗರ ಪ್ರದೇಶಗಳ ವಾರ್ಡ್ಗಳ ವ್ಯಾಪ್ತಿಯಲ್ಲಿ ಸರಾಸರಿ 4,000 ಸಂಘಗಳನ್ನು ಒಳಗೊಂಡಂತೆ ಒಟ್ಟು ಸುಮಾರು 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಪ್ರತಿ ಸಂಘಕ್ಕೆ ಪ್ರತಿ ವರ್ಷ ತಲಾ ₹10 ಲಕ್ಷ ಅನುದಾನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಈ ಅನುದಾನವನ್ನು ಸಂಘಗಳು ತಮ್ಮ ಉದ್ದೇಶಗಳಿಗೆ ಅನುಗುಣವಾಗಿ ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ಅನುದಾನದ ಬಳಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡುವುದರ ಜೊತೆಗೆ ಸಂಘದ ಆದಾಯ-ವೆಚ್ಚದ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಸದಸ್ಯತ್ವಕ್ಕೆ ಆಧಾರ್ ಕಡ್ಡಾಯ

ಭಾರತ್ ಜೋಡೋ ಯುವ ಸಂಘಗಳ ಸದಸ್ಯತ್ವ ಹಾಗೂ ನೋಂದಣಿ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. BJYS ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ಯುವಕರು ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದಲೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

ಪ್ರತಿಯೊಬ್ಬ ಸದಸ್ಯರ ನೋಂದಣಿಗೆ ಆಧಾರ್ ಕಡ್ಡಾಯವಾಗಿದ್ದು, 16ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಮಾತ್ರ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಒಂದು ಯುವ ಸಂಘದ ಘಟಕ ರಚನೆಗೆ ಕನಿಷ್ಠ 100 ಯುವ ಸದಸ್ಯರು ಇರಬೇಕು. ಪ್ರತಿ ಸದಸ್ಯರಿಗೆ ₹10 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿಯೊಂದು ಸಂಘವನ್ನು ಕರ್ನಾಟಕ ಸೊಸೈಟೀಸ್ ನೋಂದಣಿ ಕಾಯ್ದೆ-1960ರ ಅಡಿಯಲ್ಲಿ ನೋಂದಾಯಿಸಬೇಕು.

ಅರ್ಜಿದಾರರು ತಾವು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ನ ಸಾಮಾನ್ಯ ನಿವಾಸಿಯಾಗಿರಬೇಕು. ಒಬ್ಬ ಸದಸ್ಯರು ಒಂದು ಸಂಘಕ್ಕೆ ಮಾತ್ರ ಸದಸ್ಯರಾಗಲು ಅರ್ಹರಾಗಿರುತ್ತಾರೆ ಎಂದು ಡಾ. ಶರಣು ಗೋಗೇರಿ ಸಭೆಯಲ್ಲಿ ಮಾಹಿತಿ ನೀಡಿದರು.

ಕ್ರೀಡೆ, ಪರಿಸರ, ಕೌಶಲ್ಯಾಭಿವೃದ್ಧಿಗೆ ಆದ್ಯತೆ

ಪ್ರತಿಯೊಂದು ಭಾರತ್ ಜೋಡೋ ಯುವ ಸಂಘವು ತನ್ನ ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ಸಿದ್ಧಪಡಿಸಬೇಕು. ಕ್ರೀಡೆ, ಫಿಟ್ನೆಸ್, ಸಮುದಾಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವರ್ಷವಿಡೀ ಚಟುವಟಿಕೆಗಳನ್ನು ಆಯೋಜಿಸಬೇಕು.

ಯುವಜನರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುವುದು, ಯುವಕರ ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಫಿಟ್ನೆಸ್ ಕಾರ್ಯಕ್ರಮಗಳನ್ನು ನಡೆಸುವುದು, ಪರಿಸರ ಸಂರಕ್ಷಣೆಗೆ ಸಸಿ ನೆಡುವುದು ಹಾಗೂ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಸಂಘಗಳು ಹಮ್ಮಿಕೊಳ್ಳಬಹುದಾಗಿದೆ.

ಅದೇ ರೀತಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ, ವೃತ್ತಿಪರ ಮಾರ್ಗದರ್ಶನ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಗ್ರಾಮ ಹಾಗೂ ನಗರ ಪ್ರದೇಶಗಳ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಸಮುದಾಯದ ಸಹಭಾಗಿತ್ವದೊಂದಿಗೆ ಅವುಗಳ ಪರಿಹಾರಕ್ಕೆ ಮುಂದಾಗುವಂತೆ ಯುವ ಸಂಘಗಳನ್ನು ಸಕ್ರಿಯಗೊಳಿಸಲಾಗುವುದು.

ಚಟುವಟಿಕೆಗಳ ಜಿಯೋ-ಟ್ಯಾಗ್ ವರದಿ ಕಡ್ಡಾಯ

ಯುವ ಸಂಘಗಳು ಕೈಗೊಳ್ಳುವ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನಿರ್ವಹಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡ ಪ್ರತಿಯೊಂದು ಚಟುವಟಿಕೆಯ ವರದಿಯನ್ನು ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳೊಂದಿಗೆ ಸಂಬಂಧಪಟ್ಟ ಸಾಫ್ಟ್ವೇರ್ನಲ್ಲಿ ಅಪ್ಲೋಡ್ ಮಾಡಬೇಕು.

ಸರ್ಕಾರದ ಹಾಗೂ ಸಮುದಾಯದ ಕಾರ್ಯಕ್ರಮಗಳಲ್ಲಿ ಸಂಘಗಳು ಸಕ್ರಿಯವಾಗಿ ಸಹಯೋಗ ನೀಡಬೇಕು. ಸಮುದಾಯದಲ್ಲಿ ಏಕತೆ, ಸಾಮರಸ್ಯ ಹಾಗೂ ಶಿಸ್ತಿನ ಕಾರ್ಯನಿರ್ವಹಣೆಯನ್ನು ಖಚಿತಪಡಿಸಬೇಕು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಂಘಗಳು ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಡಾ. ಶರಣು ಗೋಗೇರಿ ಹೇಳಿದರು.

ಬಾಲ್ಯವಿವಾಹ, ಅಪೌಷ್ಟಿಕತೆ ವಿರುದ್ಧ ಜಾಗೃತಿ

ಭಾರತ್ ಜೋಡೋ ಯುವ ಸಂಘಗಳು ಕೇವಲ ಕ್ರೀಡೆ ಹಾಗೂ ಮನರಂಜನಾ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮಾಜದ ಪ್ರಮುಖ ಸಮಸ್ಯೆಗಳ ವಿರುದ್ಧವೂ ಜಾಗೃತಿ ಮೂಡಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಯುವಜನರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಬಾಲ್ಯವಿವಾಹ ತಡೆಗೆ ಸಹಕರಿಸುವುದು, ಅಪೌಷ್ಟಿಕತೆಯನ್ನು ನಿವಾರಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಕೈಜೋಡಿಸುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಯುವಕರಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಮೂಲಕ ಅವರು ತಮ್ಮ ಗ್ರಾಮ, ವಾರ್ಡ್ ಹಾಗೂ ಸಮುದಾಯದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಸಂಘಗಳ ಪ್ರಮುಖ ಉದ್ದೇಶವಾಗಿದೆ. ಯುವಜನರ ಶಕ್ತಿ ಮತ್ತು ಸಮಯವನ್ನು ಸಕಾರಾತ್ಮಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಮೂಲಕ ಆರೋಗ್ಯಕರ, ಶಿಸ್ತುಬದ್ಧ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

ಜುಲೈ 31ರೊಳಗೆ ನೋಂದಣಿ ಪೂರ್ಣಗೊಳಿಸಲು ಸೂಚನೆ

ಭಾರತ್ ಜೋಡೋ ಯುವ ಸಂಘಗಳ ಘಟಕಗಳ ನೋಂದಣಿ ಹಾಗೂ ಸಾಫ್ಟ್ವೇರ್ ಸಜ್ಜುಗೊಳಿಸುವ ಪ್ರಕ್ರಿಯೆಯನ್ನು ಜುಲೈ 31, 2026ರೊಳಗೆ ಪೂರ್ಣಗೊಳಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ತಿಳಿಸಿದರು.

ಯುವಜನರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸಂಘಗಳ ಸದಸ್ಯರಾಗಿ ನೋಂದಾಯಿಸಿಕೊಳ್ಳಬೇಕು. ಯುವಶಕ್ತಿಯನ್ನು ಸಂಘಟಿಸಿ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸುವ ಮೂಲಕ ಭಾರತ್ ಜೋಡೋ ಯುವ ಸಂಘಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande