
ಕೊಪ್ಪಳ , 24 ಜುಲೈ (ಹಿ.ಸ.):
ಆ್ಯಂಕರ್ : ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಹಾಗೂ ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಯಲು ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 1,960 ಅಂಗನವಾಡಿ ಕೇಂದ್ರಗಳಿದ್ದು, ಸ್ವಂತ ಕಟ್ಟಡವಿಲ್ಲದ ಕೇಂದ್ರಗಳಿಗೆ ನರೇಗಾ ಹಾಗೂ ಇತರೆ ಅನುದಾನಗಳ ಅಡಿಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಬೇಕು. ಅಲ್ಲದೆ, ಈಗಾಗಲೇ ಉದ್ಘಾಟನೆಯಾಗಿರುವ ಕಟ್ಟಡಗಳನ್ನು ತಕ್ಷಣವೇ ಇಲಾಖೆಯ ಅಧೀನದಲ್ಲಿ ಪಡೆದುಕೊಳ್ಳುವಂತೆ ಹೇಳಿದರು.
ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ತಕ್ಷಣವೇ ಗುರುತಿಸಿ, ಅವರನ್ನು ಪೋಷಣಾ ಪುನಶ್ಚೇತನ ಕೇಂದ್ರಗಳಿಗೆ (ಎನ್ಆರ್ಸಿ) ಕಡ್ಡಾಯವಾಗಿ ದಾಖಲಿಸಿ ಸೂಕ್ತ ಚಿಕಿತ್ಸೆ ಹಾಗೂ ಆಹಾರ ಒದಗಿಸಬೇಕು. ಎನ್ಆರ್ಸಿ ಕೇಂದ್ರಗಳಲ್ಲಿ ಲಭ್ಯವಿರುವ ಬೆಡ್ಗಳು ಖಾಲಿ ಉಳಿಯಬಾರದು. ಪೋಷಕರಿಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿ ಮಕ್ಕಳನ್ನು ಭರ್ತಿ ಮಾಡುವುದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಎತ್ತರಕ್ಕೆ ತಕ್ಕಂತೆ ತೂಕವಿಲ್ಲದಿರುವುದು ಹಾಗೂ ವಯಸ್ಸಿಗೆ ತಕ್ಕಂತೆ ಎತ್ತರ ಬೆಳೆಯದಿರುವ ಸಮಸ್ಯೆ ಕಂಡುಬಂದಲ್ಲಿ, ಅಂತಹ ಮಕ್ಕಳ ಆಹಾರ ಕ್ರಮದಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದರು.
ಆಹಾರದಲ್ಲಿ ಪ್ರೋಟೀನ್, ಧಾನ್ಯಗಳು ಮತ್ತು ಪೌಷ್ಟಿಕಾಂಶಗಳ ಪ್ರಮಾಣವನ್ನು ಹೆಚ್ಚಿಸುವ ಕುರಿತು ಗೃಹ ವಿಜ್ಞಾನ ಹಾಗೂ ಪೋಷಣಾ ತಜ್ಞರ ಸಲಹೆ ಪಡೆದು ವರದಿ ಸಿದ್ಧಪಡಿಸಬೇಕು. ಅಪೌಷ್ಟಿಕತೆ ನಿರ್ಮೂಲನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರತಿ ತಿಂಗಳು ಕಟ್ಟುನಿಟ್ಟಾಗಿ ಮರುಪರಿಶೀಲನೆ ನಡೆಸಲಾಗುವುದು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡುವ ಮೂಲಕ ಅರ್ಹರಿಗೆ ಸೌಲಭ್ಯಗಳನ್ನು ತಲುಪಿಸಬೇಕು. ಅಂದಾಗ ಮಾತ್ರ ಸರ್ಕಾರಗಳು ಜಾರಿಗೆ ತರುವ ಕಾರ್ಯಕ್ರಮಗಳಿಗೆ ಮಹತ್ವ ಬರುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ಅಧಿಕಾರಿಗಳು, ಇಲಾಖೆಯಡಿ ಬರುವ ನಿಗಮಗಳು, ಸಾಂತ್ವನ ಕೇಂದ್ರಗಳು, ವಿವಿಧ ಸಂಘ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಮಾತನಾಡಿ, ಅಂಗನವಾಡಿ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ವಿತರಣೆ ನಿರಂತರವಾಗಿ ಮಾಡಬೇಕು. ಬೆಲೆ ವ್ಯತ್ಯಾಸವಾದ ಸಂದರ್ಭದಲ್ಲಿ ಮೊಟ್ಟೆ ವಿತರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತಿದ್ದು, ಈ ಸಮಸ್ಯೆಗೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಸರಿಪಡಿಸಿಕೊಳ್ಳಬೇಕು. ಹಾಲಿನ ಪುಡಿಯ ಸರಬರಾಜಿನಲ್ಲಿಯೂ ಸಹ ಯಾವುದೇ ಕೊರತೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ವಿವಿಧ ಕಾರ್ಯಕ್ರಮ, ಯೋಜನೆಗಳ ಪ್ರಗತಿ ಪರಿಶೀಲನೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಂಗನವಾಡಿ ಕೇಂದ್ರಗಳ ವಿವರ, ಅಂಗನವಾಡಿ ಕೇಂದ್ರಗಳ ದಾಖಲಾತಿ, ಮಿಷನ್ ಸಕ್ಷಮ ಅಂಗನವಾಡಿ ಪೋಷಣ 2.0, ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮ, ಮಾತೃಪೂರ್ಣ ಯೋಜನೆ, ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ನೇಮಕಾತಿ, ಭಾಗ್ಯಲಕ್ಷ್ಮೀ-ಸುಕನ್ಯ ಸಮೃದ್ಧಿ ಯೋಜನೆ, ಸ್ತ್ರೀಶಕ್ತಿ, ಗೃಹಲಕ್ಷ್ಮೀ, ಮಿಷನ್ ಶಕ್ತಿ, ಮಹಿಳಾ ಸಬಲೀಕರಣ, ಬೇಟಿ ಬಚಾವೊ ಬೇಟಿ ಪಡಾವೊ, ಸಖಿ ಒನ್ ಸ್ಟಾಪ್ ಸೆಂಟರ್, ಪಿಎಂ ಮಾತೃವಂದನಾ ಯೋಜನೆ, ಸಾಂತ್ವನ ಯೋಜನೆ, ಬಾಲಕಿಯರ ವಸತಿ ನಿಲಯ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ & ನಿಯಮ, ಅಕ್ಕಪಡೆ, ವಧು-ವರದಕ್ಷಿಣೆ ನಿಷೇಧ ಕಾಯ್ದೆ, ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ ಹಾಗೂ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಯಿತು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತ ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಗದೀಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಅಮರೇಶ ಹಾವಿನ, ಯುನಿಸೆಫ್ ಜಿಲ್ಲಾ ಮಕ್ಕಳ ಯೋಜನೆಯ ಸಂಯೋಜಕರಾದ ಹರೀಶ್ ಜೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ನಿಗಮಗಳು, ಸಾಂತ್ವನ ಕೇಂದ್ರಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್