
ತುಮಕೂರು, 23 ಜುಲೈ (ಹಿ.ಸ.):
ಆ್ಯಂಕರ್:
ತಿರುಪತಿಗೆ ತೆರಳುವ ಭಕ್ತರಿಗೆ ಹಾಗೂ ಮಧ್ಯ ಮತ್ತು ಉತ್ತರ ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರವು ಮಹತ್ವದ ಸಿಹಿ ಸುದ್ದಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ 69ರ ಶಿರಾ-ಬಡವನಹಳ್ಳಿ ಭಾಗದ ರಸ್ತೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಪ್ರಕಟಿಸಿದ್ದಾರೆ.
ಈ ನೂತನ ಯೋಜನೆಯಿಂದ ತಿರುಪತಿ ಪ್ರಯಾಣದ ಅಂತರದಲ್ಲಿ ಬರೋಬ್ಬರಿ 60 ಕಿಲೋಮೀಟರ್ ಕಡಿತವಾಗಲಿದ್ದು, ಕೇವಲ 4 ಗಂಟೆಗಳಲ್ಲೇ ತಿರುಪತಿ ತಲುಪಬಹುದು. ಶಿರಾ - ಬಡವನಹಳ್ಳಿ - ಬೈರೆನಹಳ್ಳಿವರೆಗಿನ ಒಟ್ಟು 52 ಕಿಲೋಮೀಟರ್ ರಸ್ತೆಯನ್ನು ಅಂದಾಜು 1,585 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆಯು ಶಿರಾದಿಂದ ಹೊರಟು ಮಧುಗಿರಿ, ಚಿಕ್ಕಬಳ್ಳಾಪುರ ಹಾಗೂ ಚಿಂತಾಮಣಿ ಮಾರ್ಗವಾಗಿ ಸಾಗಲಿದೆ.
ಅಲ್ಲದೆ, ಈ ಹೆದ್ದಾರಿಯು ವಸಂತನರಸಾಪುರ ಮತ್ತು ಶಿರಾದ ಕೈಗಾರಿಕಾ ವಲಯಗಳಿಂದ ಚೆನ್ನೈ ಬಂದರಿಗೆ ತಡೆರಹಿತ ಸರಕು ಸಾಗಣೆಗೆ ನೆರವಾಗಲಿದೆ. ಭವಿಷ್ಯದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಇದು ಪ್ರಮುಖ ಪರ್ಯಾಯ ಮಾರ್ಗವಾಗಲಿದೆ. ಬಡವನಹಳ್ಳಿಯಿಂದ ಬೈರೆನಹಳ್ಳಿವರೆಗಿನ 32 ಕಿ.ಮೀ ಚತುಷ್ಪಥ ರಸ್ತೆಗಾಗಿ 1,000 ಕೋಟಿ ರೂಪಾಯಿಗಳ ಪ್ರಸ್ತಾವನೆಯು ಅಂತಿಮ ಹಂತದಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII