
ಬೆಂಗಳೂರು, 23 ಜುಲೈ (ಹಿ.ಸ.):
ಆ್ಯಂಕರ್:ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪ ಹಾಗೂ ಕೆಪಿಟಿಸಿಎಲ್ ಮತ್ತು ಬೆಸ್ಕಾಂನಲ್ಲಿ ನಕಲಿ ಡಿಪ್ಲೊಮಾ ಪ್ರಮಾಣಪತ್ರಗಳ ಆಧಾರದ ಮೇಲೆ ಬಡ್ತಿ ಪಡೆದಿರುವ ಆರೋಪಗಳು ಗಂಭೀರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಶಿಕ್ಷಣ ಕ್ಷೇತ್ರದಿಂದ ಇಂಧನ ಇಲಾಖೆಯವರೆಗೆ ನಕಲಿ ದಾಖಲೆಗಳ ಬಳಕೆ ಮತ್ತು ಅಕ್ರಮಗಳ ಆರೋಪಗಳು ಕೇಳಿಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಕಲಿ ಪಿಎಚ್‌ಡಿ ಹಾಗೂ ನಕಲಿ ಡಿಪ್ಲೊಮಾ ಪ್ರಮಾಣಪತ್ರ ಪ್ರಕರಣಗಳ ಕುರಿತು ಸಿಐಡಿ ತನಿಖೆ ನಡೆಸಿ, ಇದರ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಕಲಿ ಪ್ರಮಾಣಪತ್ರ ಜಾಲದಲ್ಲಿ ಭಾಗಿಯಾಗಿರುವ ಸಂಸ್ಥೆಗಳು ಹಾಗೂ ಏಜೆನ್ಸಿಗಳ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.