
ಬಾಗಲಕೋಟೆ, 23 ಜುಲೈ (ಹಿ.ಸ.):
ಆ್ಯಂಕರ್ : ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವುದು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ನವನಗರದ ಸೆಕ್ಟರ್ ನಂ.108ರಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಯಿಗಳ ಸಂತಾನ ಹರಣ ಹಾಗೂ ಚಿಕಿತ್ಸಾ ಕೇಂದ್ರಕ್ಕೆ ಉಪ ಲೋಕಾಯುಕ್ತರಾದ ವೀರಪ್ಪ ಅವರು ಗುರುವಾರ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಕೇಂದ್ರದಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ, ಚಿಕಿತ್ಸೆ, ಆರೈಕೆ, ಆಹಾರ ವ್ಯವಸ್ಥೆ, ಸ್ವಚ್ಛತೆ, ವೈದ್ಯಕೀಯ ಸೌಲಭ್ಯಗಳು ಹಾಗೂ ಪ್ರಾಣಿಗಳ ಪುನರ್ವಸತಿ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೇಂದ್ರದಲ್ಲಿ ದಾಖಲಾಗುವ ನಾಯಿಗಳಿಗೆ ಅಗತ್ಯ ವೈದ್ಯಕೀಯ ಸೇವೆಗಳು ಸಮಯಕ್ಕೆ ಸರಿಯಾಗಿ ದೊರೆಯಬೇಕು ಹಾಗೂ ಪ್ರಾಣಿ ಕಲ್ಯಾಣದ ಎಲ್ಲ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಯೋಜನೆಗಳು, ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಲಸಿಕೆ ಕಾರ್ಯಕ್ರಮ, ಸಿಬ್ಬಂದಿಯ ಕಾರ್ಯನಿರ್ವಹಣೆ ಹಾಗೂ ಕೇಂದ್ರದ ಮೂಲಸೌಕರ್ಯಗಳ ಕುರಿತು ಉಪ ಲೋಕಾಯುಕ್ತರು ವಿವರವಾಗಿ ಪರಿಶೀಲಿಸಿದರು. ಸಾರ್ವಜನಿಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಬೇಕು ಮತ್ತು ನಗರದಲ್ಲಿ ನಾಯಿಗಳ ನಿರ್ವಹಣೆಗೆ ವೈಜ್ಞಾನಿಕ ಹಾಗೂ ಮಾನವೀಯ ವಿಧಾನಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಕೇಂದ್ರದ ಕಾರ್ಯವೈಖರಿ, ಲಭ್ಯ ಸೌಲಭ್ಯಗಳು ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕ ಆರೋಗ್ಯ ಮತ್ತು ಪ್ರಾಣಿ ಕಲ್ಯಾಣ ಎರಡಕ್ಕೂ ಸಮಾನ ಆದ್ಯತೆ ನೀಡುವ ಮೂಲಕ ಕೇಂದ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಉಪ ಲೋಕಾಯುಕ್ತರು ನಿರ್ದೇಶನ ನೀಡಿದರು.
ಪರಿಶೀಲನಾ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande