
ಮಡಿಕೇರಿ, 23 ಜುಲೈ (ಹಿ.ಸ.):
ಆ್ಯಂಕರ್:
ಕ್ರೀಡಾ ಇಲಾಖೆಯಲ್ಲಿ ಅಕ್ರಮಗಳ ಕುರಿತು ಸಲ್ಲಿಕೆಯಾದ ದೂರುಗಳ ಆಧಾರದ ಮೇಲೆ, ಲೋಕಾಯುಕ್ತ ಪೊಲೀಸರು ಇಂದು ಕೊಡಗು ಜಿಲ್ಲೆಯ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತನಿಖಾ ತಂಡವು ಮಡಿಕೇರಿಯ ಕ್ರೀಡಾ ಇಲಾಖೆ ಉಪನಿರ್ದೇಶಕರ ಮುಖ್ಯ ಕಚೇರಿ, ಕೂಡಿಗೆ ಹಾಗೂ ಪೊನ್ನಂಪೇಟೆಯಲ್ಲಿರುವ ಕ್ರೀಡಾಶಾಲೆಗಳ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಅಧಿಕಾರಿಗಳು ಕಚೇರಿಗಳಲ್ಲಿನ ಕಡತಗಳು, ವಿವಿಧ ಹಣಕಾಸು ವ್ಯವಹಾರಗಳು, ಕ್ರೀಡಾ ಸಾಮಗ್ರಿಗಳ ಖರೀದಿ ಪ್ರಕ್ರಿಯೆ ಹಾಗೂ ಇತರೆ ಪ್ರಮುಖ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ.
ಕ್ರೀಡಾ ಇಲಾಖೆಯಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸುಮಾರು ನಾಲ್ಕು ಗಂಟಗಳ ಕಾಲ ದಾಖಲೆ ಪರಿಶೀಲನಾ ಕಾರ್ಯ ನಡೆದಿದ್ದು, ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII