
ಮೈಸೂರು, 23 ಜುಲೈ (ಹಿ.ಸ.):
ಆ್ಯಂಕರ್:
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಜೋಳದ ಹೊಲದಲ್ಲಿ ಅಡ್ಡಾದಿಡ್ಡಿ ಓಡಾಡಿದ ಮರಿಯಾನೆಯೊಂದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿತ್ತು. ರೈತ ಮಹಿಳೆ ಸಣ್ಣಮ್ಮ ಅವರ ಜಮೀನಿನಲ್ಲಿ ಕಳೆದ ನಾಲ್ಕು ದಿನಗಳಿಂದ ಆನೆ ಮರಿ ತಂಗಿದ್ದು, ಮುಸುಕಿನ ಜೋಳದ ಬೆಳೆಯನ್ನು ತಿಂದು, ತುಳಿದು ನಾಶಪಡಿಸಿದ್ದರಿಂದ ರೈತ ಮಹಿಳೆಗೆ ಅಪಾರ ನಷ್ಟ ಉಂಟಾಗಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ 3 ಸಾಕಾನೆಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಮರಿ ಆನೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದರು. ಆದರೆ ಕಾರ್ಯಾಚರಣೆ ವೇಳೆ ಸಿಗದೆ ಆನೆ ಮರಿಯು ಜಮೀನಿನಲ್ಲಿ ಅಡ್ಡಾದಿಡ್ಡಿ ಓಡಾಡಿತು.
ಸತತ 6 ಗಂಟೆಗಳ ಕಾಲ ಸಾಹಸ ಪಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾಕಾನೆಗಳ ಸಹಾಯದಿಂದ ಮರಿಯಾನೆಯನ್ನು ಯಶಸ್ವಿಯಾಗಿ ಕಾಡಿಗಟ್ಟಲಾಗಿದ್ದು, ಗ್ರಾಮಸ್ಥರು ಹಾಗೂ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII