
ಕುಷ್ಟಗಿ, 23 ಜುಲೈ (ಹಿ.ಸ.)
ಆ್ಯಂಕರ್ : ಕುಷ್ಟಗಿ ತಾಲ್ಲೂಕಿನಲ್ಲಿ 2020-21 ರಿಂದ 2021-22 ರ ಸಾಲಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಒಟ್ಟು 969.05 ಕ್ವಿಂಟಾಲ್ ಅಕ್ಕಿಯನ್ನು ಜುಲೈ 30 ರಂದು ಬೆಳಿಗ್ಗೆ 11 ಗಂಟೆಗೆ ಕುಷ್ಟಗಿ ಪಟ್ಟಣದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಸಗಟು ಮಳಿಗೆಯಲ್ಲಿ ಬಹಿರಂಗ ಹರಾಜು ಮಾಡಲಾಗುತಿದ್ದು, ಆಸಕ್ತಿಯುಳ್ಳ ಎ.ಪಿ.ಎಂ.ಸಿ ಪರವಾನಿಗೆದಾರರು ಷರತ್ತುಗಳಿಗೆ ಒಳಪಟ್ಟು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಕುಷ್ಟಗಿ ತಹಶೀಲ್ದಾರರು ತಿಳಿಸಿದ್ದಾರೆ.
*ಷರತ್ತುಗಳು:*
ಹರಾಜಿನಲ್ಲಿ ಭಾಗವಹಿಸಲು ಬಿಡ್ಡುದಾರರು ಎ.ಪಿ.ಎಂ.ಸಿ ಪರವಾನಿಗೆ ಹೊಂದಿರಬೇಕು. ಬಿಡ್ಡುದಾರರು ಹರಾಜಿನ ದಿನ 1 ಗಂಟೆ ಮುಂಚಿತವಾಗಿ ಹಾಜರಾಗಿ ಶೇ.10 ರಷ್ಟು ಮೊಬಲಗನ್ನು ಮುಂಗಡವಾಗಿ ಠೇವಣಿ ಪಾವತಿಸಬೇಕು. ಎ.ಪಿ.ಎಂ.ಸಿ ಪರವಾನಿಗೆ ಪ್ರತಿ, ಆಧಾರ್ ಕಾರ್ಡ್ ಪ್ರತಿ, 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಸಲ್ಲಿಸಬೇಕು. ಹರಾಜು ಮುಗಿದ ನಂತರ ಠೇವಣಿ ಮೊತ್ತವನ್ನು 2ನೇ ಗರಿಷ್ಠ ಬಿಡ್ಡುದಾರರು ಹೊರತುಪಡಿಸಿ ಉಳಿದ ಬಿಡ್ಡುದಾರರಿಗೆ ಸ್ಥಳದಲ್ಲಿಯೇ ಹಿಂತಿರುಗಿಸಲಾಗುವುದು.
ಗರಿಷ್ಠ ಬಿಡ್ಡುದಾರರಿಗೆ ನಿಗದಿತ ಅವಧಿಯೊಳಗೆ ಪೂರ್ಣ ಹಣವನ್ನು ಪಾವತಿಸಲು ವಿಫಲರಾದಲ್ಲಿ ಠೇವಣಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನಂತರ 2ನೇ ಬಿಡ್ಡುದಾರರಿಗೆ ಅವಕಾಶ ಮಾಡಿಕೊಡಲಾಗುವುದು.
ಠೇವಣಿ ಮೊತ್ತವನ್ನು ಪಾವತಿಸದೇ ಇರುವವರು ಹರಾಜಿನಲ್ಲಿ ಭಾಗವಹಿಸುವಂತಿಲ್ಲ. ಸರ್ಕಾರಕ್ಕೆ ಜಪ್ತಿ ಮಾಡಿಕೊಂಡಿರುವ ಅಕ್ಕಿಯನ್ನು ಹಾಲಿ ಇರುವ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಅಕ್ಕಿಯನ್ನು ಪಡೆದವರು ತಕ್ಷಣವೇ ಉಳಿದ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡತಕ್ಕದ್ದು ಮತ್ತು ಹರಾಜಾದ ಅಕ್ಕಿಯನ್ನು ಆದೇಶ ನೀಡಿದ ತಕ್ಷಣ ಸ್ವಂತ ಖರ್ಚಿನಲ್ಲಿಯೇ ಎತ್ತುವಳಿ ಮತ್ತು ಸಾಗಾಣಿಕೆ ಮಾಡಿಕೊಳ್ಳಬೇಕು. ಎ.ಪಿಎಂ.ಸಿ ಸೆಸ್ ಮತ್ತು ಇತರೆ ಯಾವುದಾದರು ಸರ್ಕಾರಕ್ಕೆ ಕಟ್ಟಬೇಕಾದ ಸೆಸ್ಗಳನ್ನು ಹರಾಜು ಹಿಡಿದ ವ್ಯಕ್ತಿಗಳೇ ಭರಿಸತಕ್ಕದ್ದು. ಹರಾಜಿನಲ್ಲಿ ಭಾಗವಹಿಸಲು ಭದ್ರತಾ ಠೇವಣಿಯನ್ನು ಪಾವತಿಸಿದ ಬಿಡ್ಡುದಾರರು ಗೊತ್ತುಪಡಿಸಿದ ದಿನಾಂಕ/ವೇಳೆಗಿಂತ 1 ಗಂಟೆ ಮುಂಚಿತವಾಗಿ ಹಾಜರಿರತಕ್ಕದ್ದು ಮತ್ತು ಆಹಾರ ಧಾನ್ಯ ವಿಕ್ಷಣೆ ಮಾಡಬಹುದಾಗಿರುತ್ತದೆ.
ಹರಾಜಿನಲ್ಲಿ ನಿಗದಿಪಡಿಸಿದ ಸರ್ಕಾರಿ ಸವಾಲು ಮೊತ್ತಕ್ಕಿಂತ ಕಡಿಮೆ ಮೊತ್ತ ಕೂಗಿದಲ್ಲಿ ಹಾಗೂ ಹರಾಜು ಸಮಯದಲ್ಲಿ ಬಿಡ್ಡುದಾರರು ಸಂಖ್ಯೆ ಕಡಿಮೆ ಇದ್ದಲ್ಲಿ ಹರಾಜು ಮುಂದೂಡುವ ಅಧಿಕಾರ ಹಾಗೂ ಅಂತಿಮವಾಗಿ ಹರಾಜು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವ ತೀರ್ಮಾನವು ತಹಶೀಲ್ದಾರರಿಗೆ ಒಳಪಟ್ಟಿರುತ್ತದೆ ಎಂದು ಕುಷ್ಟಗಿ ತಹಶೀಲ್ದಾರ ಕಾರ್ಯಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್