




ಕೊಪ್ಪಳ, 23 ಜುಲೈ (ಹಿ.ಸ.)
ಆ್ಯಂಕರ್ : ಮಳೆ ಕೊರತೆಯಿಂದ ಬೆಳೆಗಳು ಕುಂಠಿತಗೊಂಡಿರುವ ಜಿಲ್ಲೆಯ ಕೊಪ್ಪಳ ಮತ್ತು ಇರಕಲ್ಗಡ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಕೃಷಿ ತಾಕುಗಳಿಗೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕೊಪ್ಪಳ ಜಿಲ್ಲೆಯ ಕೊಪ್ಪಳ ಹಾಗೂ ಇರಕಲ್ಗಡ ಹೋಬಳಿಗಳ ವ್ಯಾಪ್ತಿಯ ಟಣಕನಕಲ್, ತಾಳಕನಕಾಪುರ, ಯಲ್ಲಮಗೇರಿ ಮತ್ತು ಚಿಲಕಮುಖಿ ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಕುಂಠಿತಗೊಂಡಿರುವ ಕೃಷಿ ತಾಕುಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ ಅವರು ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕೆ ಜಂಟಿ ನಿರ್ದೇಶಕರು ಮತ್ತು ಪಶು ಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರೊಂದಿಗೆ ರೈತರ ಹೊಲಗಳಿಗೆ ತೆರಳಿ, ಅಲ್ಲಿನ ಸ್ಥಿತಿಗತಿಗಳನ್ನು ಖುದ್ದಾಗಿ ವೀಕ್ಷಿಸಿದರು.
ಇದೇ ವೇಳೆ ಮಳೆ ಕೊರತೆಯಿಂದ ಹಾನಿಗೊಳಗಾದ ಮೆಕ್ಕೆಜೋಳ, ತೊಗರಿ ಹಾಗೂ ಸಜ್ಜೆ ಬೆಳೆಗಳ ತಾಕುಗಳನ್ನು ಪರಿಶೀಲಿಸಿ, ರೈತರೊಂದಿಗೆ ಸಮಾಲೋಚನೆ ನಡೆಸಿ, ರೈತರು ತಮ್ಮ ಬೆಳೆಗಳ ಬೆಳೆ ಸಮೀಕ್ಷೆ ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಬೆಳೆ ಸಮೀಕ್ಷೆಯ ಮೂಲಕ ಬೆಳೆ ವಿಸ್ತೀರ್ಣ, ಬೆಳೆಗಳ ಪ್ರಸ್ತುತ ಸ್ಥಿತಿ ಹಾಗೂ ಬೆಳವಣಿಗೆಯ ಮಾಹಿತಿಯನ್ನು ನಿಖರವಾಗಿ ದಾಖಲಿಸಬಹುದಾಗಿದೆ. ಅಲ್ಲದೆ, ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಲು ಬೆಳೆ ಸಮೀಕ್ಷೆಯು ಪ್ರಮುಖ ಆಧಾರವಾಗಿದ್ದು, ಬೆಳೆ ಹಾನಿ ಪರಿಹಾರ, ಬರ ಘೋಷಣೆ, ಬೆಳೆ ವಿಮೆ ಪರಿಹಾರ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಮಾಹಿತಿಯು ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.
ರೈತರು ಬೆಳೆಗಳನ್ನು ಹರಗುವ (ಉಳುಮೆ ಮಾಡುವ) ಮೊದಲು ಕಡ್ಡಾಯವಾಗಿ ಬೆಳೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಪ್ರಕೃತಿ ವಿಕೋಪಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರೈತರನ್ನು ರಕ್ಷಿಸಲು ಬೆಳೆ ವಿಮೆ ಪರಿಣಾಮಕಾರಿ ಸಾಧನವಾಗಿದ್ದು, ಅರ್ಹ ರೈತರು ನಿಗದಿತ ಅವಧಿಯೊಳಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.
ಬೆಳೆ ವಿಮೆ ಕುರಿತು ಗ್ರಾಮ ಮಟ್ಟದಲ್ಲಿ ಮಾಹಿತಿ, ತರಬೇತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾ ಡಾ. ಪಿ.ಎಂ. ಮಲ್ಲಯ್ಯ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶ್ರೀನಿವಾಸ, ಉಪ ಕೃಷಿನಿರ್ದೇಶಕರಾದ ಎಲ್.ಸಿದ್ದೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಪಿಡಿಓಗಳು, ರೈತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್