
ಬೆಂಗಳೂರು, 23 ಜುಲೈ (ಹಿ.ಸ.):
ಆ್ಯಂಕರ್:
ಕರ್ನಾಟಕವನ್ನು ಜಾಗತಿಕ ಮಟ್ಟದ ಅಗ್ರಗಣ್ಯ ಪ್ರವಾಸಿ ತಾಣವನ್ನಾಗಿ ರೂಪಿಸಲು ಸಾರಿಗೆ-ಸಂಪರ್ಕ ವ್ಯವಸ್ಥೆ ಸುಧಾರಣೆ, ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಖಾಸಗಿ ಹೂಡಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 26ನೇ 'ಇಂಡಿಯನ್ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಬಲ್ಲ 'ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026' ಅನ್ನು ಶೀಘ್ರದಲ್ಲೇ ಅಂತಿಮಗೊಳಿಸುವುದಾಗಿ ಘೋಷಿಸಿದರು. 343 ಕಿ.ಮೀ. ಗೂ ಅಧಿಕ ಕರಾವಳಿ ತೀರ ಹೊಂದಿರುವ ಕರ್ನಾಟಕದಲ್ಲಿ ಬೀಚ್, ಕ್ರೂಸ್ ಮತ್ತು ಜಲ ಕ್ರೀಡೆಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದರು.
ಗೋವಾ ಹಾಗೂ ಕೇರಳಕ್ಕೆ ಹೋಲಿಸಿದರೆ ಕರಾವಳಿ ನಿಯಂತ್ರಣ ವಲಯದ ಸ್ಥಳೀಯ ನಿಯಮಗಳು ಕಠಿಣವಾಗಿರುವುದರಿಂದ, ವಾಣಿಜ್ಯ ಚಟುವಟಿಕೆಗಳನ್ನು ಸರಳಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆದಾರರಿಗೆ ಏಕಗವಾಕ್ಷಿ ಮಂಜೂರಾತಿ ಹಾಗೂ ಸಬ್ಸಿಡಿಗಳ ಮೂಲಕ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್, ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್., ಜೆಎಲ್ಆರ್ ವ್ಯವಸ್ಥಾಪಕ ನಿರ್ದೇಶಕ ಶಿವರಾಂ ಬಾಬು ಹಾಗೂ ಕೆ. ಶ್ಯಾಮರಾಜು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII