
ಕೊಪ್ಪಳ, 23 ಜುಲೈ (ಹಿ.ಸ.)
ಆ್ಯಂಕರ್ : ಜಿಲ್ಲೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಂಪನಿ ನಡೆದುಕೊಂಡ ಅನುಚಿತ ವ್ಯಾಪಾರ ನೀತಿಯನ್ನು ಮುಂದುವರೆಸದಂತೆ ಎಚ್ಚರಿಕೆ ನೀಡಿ ಒಂದು ಪ್ರಕರಣದಲ್ಲಿ ರೂ.30,000/-ಗಳನ್ನು ಮತ್ತೊಂದು ಪ್ರಕರಣದಲ್ಲಿ ರೂ.15,000/-ಗಳನ್ನು ಗ್ರಾಹಕರ ಕಲ್ಯಾಣ ನಿಧಿಗೆ ದಂಡವಾಗಿ ಪಾವತಿಸುವಂತೆ ಆದೇಶ ನೀಡಿದೆ.
ಈ ಎರಡು ಪ್ರಕರಣಗಳಲ್ಲಿ ದೂರುದಾರರ ಪತಿ ವಿಮೆಗಾಗಿ ಪಾವತಿಸಿದ ವಿಮಾ ಕಂತಿನ ಮೊತ್ತವನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸುವುದರೊಂದಿಗೆ ಪರಿಹಾರ ಹಾಗೂ ಪ್ರಕರಣದ ಖರ್ಚು-ವೆಚ್ಚಗಳನ್ನು ನೀಡುವಂತೆ ಆಯೋಗದ ಪ್ರಭಾರ ಅಧ್ಯಕ್ಷರಾದ ಜಿ.ಇ. ಸೌಭಾಗ್ಯಲಕ್ಮ್ಷಿ ಹಾಗೂ ಸದಸ್ಯರಾದ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಅವರುಗಳು ಈ ಆದೇಶಗಳನ್ನು ಹೊರಡಿಸಿದ್ದಾರೆ.
ಪ್ರಕರಣ ಸಂಖ್ಯೆ:97/2025ರಲ್ಲಿ ಶ್ರೀಮತಿ ಶಾರದಾ ಪವಾರ್ ಎಂಬುವರು ಬಜಾಜ್ ಅಲಿಯನ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ವಿರುದ್ಧ ದೂರು ದಾಖಲಿಸಿ, ತನ್ನ ಪತಿ ಜೀವಂತವಿದ್ದಾಗ ಪಡೆದಿದ್ದ ಎರಡು ವಿಮೆಯ ವಿಮಾ ಮೊತ್ತ ರೂ.1,82,50,000/-ಗಳನ್ನು ಪಾವತಿಸುವಂತೆ ಆದೇಶಿಸಬೇಕೆಂದು ಕೋರಿದ್ದರು.
ಈ ಪ್ರಕರಣದಲ್ಲಿ ಎದುರುದಾರ ವಿಮಾ ಕಂಪನಿ, ದೂರುದಾರರ ಪತಿ ವಿಮೆ ಪಡೆಯುವಾಗ ತನಗಿದ್ದ ಪೂರ್ವ ಕಾಯಿಲೆಯ ಬಗ್ಗೆ ಬಹಿರಂಗಪಡಿಸಿಲ್ಲ ಮತ್ತು ವಿಮೆ ಪಡೆದ ವ್ಯಕ್ತಿ ಬಿಪಿಎಲ್ ಕಾರ್ಡ್ ಹೊಂದಿದ್ದು, ರೂ. 9 ಲಕ್ಷ ಆದಾಯವಿದೆ ಎಂದು ಸುಳ್ಳು ಹೇಳಿದ್ದಾರೆಂಬ ಕಾರಣಕ್ಕೆ ವಿಮೆ ತಿರಸ್ಕಾರ ಮಾಡಿದ್ದರಿಂದ ದೂರುದಾರರು ಈ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಸಂಖ್ಯೆ: 104/2025 ರಲ್ಲಿ ಶ್ರೀಮತಿ ಲಾಲಬೀ ಖಾಜಾಖಾನ ಎಂಬುವರು ಬಜಾಜ್ ಅಲಿಯನ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ವಿರುದ್ಧ ದೂರು ದಾಖಲಿಸಿ, ತನ್ನ ಪತಿ ಜೀವಂತವಿದ್ದಾಗ ಪಡೆದಿದ್ದ ವಿಮೆಯ ವಿಮಾ ಮೊತ್ತ ರೂ.41,52,000/-ಗಳನ್ನು ಪಾವತಿಸುವಂತೆ ಆದೇಶಿಸಬೇಕೆಂದು ಕೋರಿದ್ದರು.
ಈ ಪ್ರಕರಣದಲ್ಲಿ ಎದುರುದಾರ ವಿಮಾ ಕಂಪನಿ, ದೂರುದಾರರ ಪತಿ ವಿಮೆ ಪಡೆಯುವಾಗ ತನಗಿದ್ದ ಪೂರ್ವ ಕಾಯಿಲೆಯ ಬಗ್ಗೆ ಬಹಿರಂಗಪಡಿಸಿಲ್ಲ ಮತ್ತು ವಿಮೆ ಪಡೆದ ವ್ಯಕ್ತಿ ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್ ಹೊಂದಿದ್ದು, ರೂ. 80 ಲಕ್ಷ ಆದಾಯವಿದೆ ಎಂದು ಸುಳ್ಳು ಹೇಳಿದ್ದಾರೆಂಬ ಕಾರಣಕ್ಕೆ ವಿಮೆ ತಿರಸ್ಕಾರ ಮಾಡಿದ್ದರಿಂದ ದೂರುದಾರರು ಈ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಎರಡು ಪ್ರಕರಣಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಆಯೋಗವು ವಿಮೆ ನೀಡುವಾಗ ಸಲ್ಲಿಕೆಯಾದ ದಾಖಲೆಗಳ ಆಧಾರದ ಮೇಲೆ ಅಂದರೆ, ತಮಗೆ ಆದಾಯ ಬರುವ ಕಡೆ ಹೆಚ್ಚು ಗಮನಹರಿಸುವ ವಿಮಾ ಕಂಪನಿಗಳು, ಪರಿಹಾರದ ಅರ್ಜಿಗಳು ಬಂದಾಗ, ಆ ಪರಿಹಾರವನ್ನು ಹೇಗೆ ತಿರಸ್ಕರಿಸಬಹುದು ಎಂಬುದಕ್ಕೆ ಬೇಕಾದ ದಾಖಲೆಗಳನ್ನು ಹುಡುಕಲು ಹೆಚ್ಚು ಪ್ರಯತ್ನ ಪಡುತ್ತವೆ ಎಂಬುದು ವಿಮಾ ಕಂಪನಿಗಳ ವರ್ತನೆಯಿಂದ ಸ್ಪಷ್ಟವಾಗಿ ಕಾಣುತ್ತದೆ. ಇಂತಹದ್ದೇ ವರ್ತನೆಯನ್ನು ವಿಮಾ ಕಂಪನಿ ಎರಡು ಪ್ರಕರಣಗಳಲ್ಲಿ ಅನುಸರಿಸಿರುವುದನ್ನು ಆಯೋಗವು ಗಮನಿಸಿದೆ.
ಅಲ್ಲದೆ ಈ ಪ್ರಕರಣಗಳಲ್ಲಿ ದೂರುದಾರರು ತಪ್ಪಾದ ಮಾಹಿತಿಯಿಂದ ವಿಮೆ ಪಡೆಯಲು ಮುಂದಾದಾಗ, ಎದುರುದಾರ ಕಂಪನಿ ವಿಮೆ ನೀಡದೇ, ಆರಂಭದಲ್ಲಿಯೇ ವಿಮಾ ಖರೀದಿಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಬೇಕು. ಆದರೆ ವಿಮೆ ನೀಡುವುದನ್ನು ತಿರಸ್ಕರಿಸದೇ, ವಿಮಾ ಕಂಪನಿ ವಿಮೆ ನೀಡಿ ವ್ಯಾಜ್ಯಕ್ಕೆ ಕಾರಣವಾಗಿದ್ದಾರೆಂಬ ಅಂಶವನ್ನು ತೀರ್ಪಿನಲ್ಲಿ ಆಯೋಗವು ಉಲ್ಲೇಖಿಸಿದೆ.
ಈ ಎರಡು ಪ್ರಕರಣಗಳಲ್ಲಿ ದೂರುದಾರರು ಕೋರಿರುವ ವಿಮಾ ಮೊತ್ತದ ಪರಿಹಾರ ನೀಡಿಲ್ಲವಾದರೂ, ದೂರುದಾರರುಗಳ ಪತಿ ಪಾವತಿಸಿದ ವಿಮಾ ಕಂತಿನ ಮೊತ್ತವನ್ನು ಹಾಗೂ ಪರಿಹಾರ ಮತ್ತು ಪ್ರಕರಣದ ಖರ್ಚು-ವೆಚ್ಚವನ್ನು ನೀಡುವುದರೊಂದಿಗೆ ವಿಮಾ ಕಂಪನಿ ಎರಡೂ ಪ್ರಕರಣದಲ್ಲಿ ಅನುಸರಿಸಿದ ಅನುಚಿತ ವ್ಯಾಪಾರ ನಡೆಯನ್ನು ಮುಂದುವರೆಸದಂತೆ ಎಚ್ಚರಿಕೆ ನೀಡಿ ದಂಡವನ್ನು ವಿಧಿಸಿ ಆದೇಶಿಸಿದೆ.
ಮೊದಲ ಪ್ರಕರಣದಲ್ಲಿ ರೂ.5,00,000/-ಗಳ ವಿಮಾ ಕಂತು ಮೊತ್ತವನ್ನು ಮತ್ತು ಈ ಮೊತ್ತಕ್ಕೆ ದಿನಾಂಕ:21.03.2024ರಿಂದ ಈವರೆಗೆ ವಾರ್ಷಿಕ ಶೇ.9 ರ ಬಡ್ಡಿಯನ್ನು ಮತ್ತು ಪರಿಹಾರವಾಗಿ ರೂ.25,000/-ಗಳನ್ನು ಹಾಗೂ ಪ್ರಕರಣದ ಖರ್ಚು-ವೆಚ್ಚವಾಗಿ ರೂ.5,000/-ಗಳನ್ನು ವಿಮಾ ಕಂಪನಿ ದೂರುದಾರರಿಗೆ ಪಾವತಿಸುವಂತೆ ಆಯೋಗ ಆದೇಶಿಸಿದೆ.
ಎರಡನೇ ಪ್ರಕರಣದಲ್ಲಿ ದೂರುದಾರರಿಗೆ ವಿಮಾ ಕಂತು ಮೊತ್ತ ರೂ.1,04,506/-ಗಳನ್ನು ಮತ್ತು ಈ ಮೊತ್ತಕ್ಕೆ ದಿನಾಂಕ:17.05.2024ರಿಂದ ಈವರೆಗೆ ವಾರ್ಷಿಕ ಶೇ.9 ರ ಬಡ್ಡಿಯನ್ನು ಮತ್ತು ಪರಿಹಾರವಾಗಿ ರೂ.10,000/-ಗಳನ್ನು ಹಾಗೂ ಪ್ರಕರಣದ ಖರ್ಚು-ವೆಚ್ಚವಾಗಿ ರೂ.5,000/-ಗಳನ್ನು ವಿಮಾ ಕಂಪನಿದಾರರು ದೂರುದಾರರಿಗೆ ಪಾವತಿಸುವಂತೆ ಆಯೋಗವು ಆದೇಶಿಸಿದೆ.
ಈ ಎರಡು ಪ್ರಕರಣಗಳಲ್ಲಿ ಎದುರುದಾರರು ಇನ್ನು ಮುಂದೆ ಅನುಚಿತ ವ್ಯಾಪಾರ ನೀತಿ ಅನುಸರಿಸದಂತೆ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಕಲಂ 39(1)(ಜಿ)ರ ಅಡಿಯಲ್ಲಿ ಗ್ರಾಹಕ ಕಲ್ಯಾಣ ನಿಧಿಗೆ ಪ್ರಕರಣ ಸಂಖ್ಯೆ : 97/2025 ರಲ್ಲಿ ರೂ.30,000/-ಗಳನ್ನು ಮತ್ತು ಪ್ರಕರಣ ಸಂಖ್ಯೆ:104/2025 ರಲ್ಲಿ ರೂ.15,000/-ಗಳನ್ನು ವಿಮಾ ಕಂಪನಿಗೆ ದಂಡ ಪಾವತಿಸುವಂತೆ ಆಯೋಗವು ಈ ಎರಡು ತೀರ್ಪುಗಳಲ್ಲಿ ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್