



ಕುರುಗೋಡು, 22 ಜುಲೈ (ಹಿ.ಸ.):
ಆ್ಯಂಕರ್ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು, ಬುಧವಾರ ಕುರುಗೋಡು ತಾಲೂಕಿನ ವ್ಯಾಪ್ತಿಯ ವದ್ದಟ್ಟಿ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ಉದ್ಯೋಗ ಖಾತ್ರಿ (ವಿಬಿ-ಜಿ ರಾಮ್ -ಜಿ) ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ನೇರವಾಗಿ ಪರಿಶೀಲಿಸಿದ್ದಾರೆ.
ಸ್ಥಳದಲ್ಲಿದ್ದ ಕೂಲಿಕಾರರೊಂದಿಗೆ ನೇರ ಸಂವಾದ ನಡೆಸಿದ ಸಿಇಒ ಅವರು, ಕೆಲಸದ ಸಮಯ, ಹಾಜರಾತಿ ಹಾಗೂ ಯೋಜನೆಯಡಿ ದಿನವೊಂದಕ್ಕೆ ದೊರೆಯುತ್ತಿರುವ ಕೂಲಿ ಮೊತ್ತದ ವಿವರಗಳನ್ನು ಕೂಲಿಕಾರರಿಂದಲೇ ಪಡೆದುಕೊಂಡರು.
ಸ್ಥಳದಲ್ಲಿದ್ದ ಕಾಯಕ ಬಂಧುಗಳಿಗೆ ನಿರ್ದೇಶನ ನೀಡಿದ ಅವರು, ಹೊಸದಾಗಿ ಕೃಷಿಯೇತರ ಚಟುವಟಿಕೆಗಳಿಗೆ ಅನುಗುಣವಾಗಿ ಸೂಕ್ತ ಕಾಮಗಾರಿಗಳ ಪಟ್ಟಿಯನ್ನು ತಕ್ಷಣ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಪ್ರತಿಯೊಂದು ಕುಟುಂಬಕ್ಕೂ ಆರ್ಥಿಕ ಭದ್ರತೆ ಸಿಗುವಂತಾಗಲು ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ ಹಾಗೂ ಕುರಿ/ಕೋಳಿ ಶೆಡ್ಡುಗಳು, ಕೃಷಿ ಹೊಂಡ ಹಾಗೂ ಸೋಕ್ ಪಿಟ್ (ಇಂಗು ಗುಂಡಿ), ಎರೆಹುಳು ಗೊಬ್ಬರ ತೊಟ್ಟಿ ಮತ್ತು ಅಜೋಲ ಘಟಕಗಳ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಕೆಲಸ ಪ್ರಾರಂಭಿಸಲು ಸೂಚಿಸಿದರು.
ಪದವೀಧರ ಕೂಲಿಕಾರರೊಂದಿಗೆ ವಿಶೇಷ ಸಂವಾದ
ಪರಿಶೀಲನೆ ವೇಳೆ ಯೋಜನೆಯಡಿಯಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಬಿ.ಎ. ಪದವೀಧರ ವಿದ್ಯಾರ್ಥಿಗಳೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು ವಿಶೇಷ ಸಂವಾದ ನಡೆಸಿ, ಅವರ ಶ್ರಮದಾನವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕುರುಗೋಡು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಶ್ರೀರಾಮ ರೆಡ್ಡಿ, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ರೇಣುಕಾ ಸ್ವಾಮಿ, ಯರಂಗಳಿಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಶುರಾಮ್, ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ್, ಐ.ಇ.ಸಿ ಸಂಯೋಜಕ ಚಂದ್ರಶೇಖರ್, ತಾಂತ್ರಿಕ ಸಹಾಯಕಿ ಅರುಣಜ್ಯೋತಿ ಮತ್ತು ಬಿಎಫ್ಟಿ ಆಗಲೂರಪ್ಪ ಸೇರಿದಂತೆ ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್